ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಕೆಟ್ಟ ಡಿಜಿಟಲ್ ಆಕ್ರಮಣಕಾರರ ಪಟ್ಟಿಯಲ್ಲಿ ಭಾರತ!

Update: 2020-03-12 15:28 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ.12: ಪತ್ರಕರ್ತರ ಮೇಲೆ ನಿಗಾ ಇರಿಸಿ ಕಿರುಕುಳ ನೀಡಲು ಸರಕಾರ ಅಥವಾ ಸಂಸ್ಥೆಗಳು ಡಿಜಿಟಲ್ ತಂತ್ರಜ್ಞಾನವನ್ನು ಬಳಸುವ ದೇಶಗಳ ಪಟ್ಟಿಯಲ್ಲಿ ಭಾರತ ಸೇರ್ಪಡೆಯಾಗಿದೆ. ಚೀನಾ, ರಶ್ಯಾ, ಇರಾನ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಈ ಪಟ್ಟಿಯಲ್ಲಿ 20 ದೇಶಗಳಿವೆ.

ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್(ಆರ್‌ಎಸ್‌ಎಫ್) ಸಿದ್ಧಪಡಿಸಿರುವ 2020ರ ಸಾಲಿನ ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಕೆಟ್ಟ ಡಿಜಿಟಲ್ ಆಕ್ರಮಣಕಾರರ ಪಟ್ಟಿಯನ್ನು ಸೈಬರ್ ಸೆನ್ಸರ್‌ಶಿಪ್ ವಿರುದ್ಧದ ಜಾಗತಿಕ ದಿನಾಚರಣೆಯ ಸಂದರ್ಭ ಬಿಡುಗಡೆಗೊಳಿಸಲಾಗಿದೆ.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ 10ನೇ ಅನುಚ್ಛೇದದಡಿ ಖಾತರಿಗೊಳಿಸಿರುವ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಸ್ಪಷ್ಟ ಅಪಾಯವನ್ನು ಈ ಪಟ್ಟಿ ತೋರಿಸುತ್ತದೆ. 2020ರ ಸಾಲಿನ ಪಟ್ಟಿಯಲ್ಲಿರುವ 20 ದೇಶಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಕಿರುಕುಳ, ಸರಕಾರದ ಸೆನ್ಸರ್‌ ಶಿಪ್, ಗೂಢಚರ್ಯೆ ಮಾಡುವುದು, ಕಣ್ಗಾವಲು(ನಿಗಾ) ಇರಿಸುವುದು ಹೀಗೆ ಚಟುವಟಿಕೆ ಆಧಾರಿತ 4 ಗುಂಪುಗಳಿವೆ. ಸರಕಾರಗಳು ಖಾಸಗಿ ವಲಯದ ಸಂಸ್ಥೆಗಳ ಮೂಲಕ ತನಿಖಾ ವರದಿಗಾರರು ಮತ್ತು ಪತ್ರಕರ್ತರ ಮೇಲೆ ನಿಗಾ ಇರಿಸುತ್ತವೆ . ಕೆಲವು ಡಿಜಿಟಲ್ ಆಕ್ರಮಣಕಾರರು ನಿರಂಕುಶ ಪ್ರಭುತ್ವದ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ . ಪಾಶ್ಚಿಮಾತ್ಯ ದೇಶಗಳಲ್ಲಿ ಸೈಬರ್ ಗೂಢಚರ್ಯೆಯಲ್ಲಿ ಪರಿಣತಿ ಪಡೆದಿರುವ ಕೆಲವು ಖಾಸಗಿ ಕ್ಷೇತ್ರದ ಸಂಸ್ಥೆಗಳಿವೆ ಎಂದು ಫ್ರಾನ್ಸ್ ಮೂಲದ ಆರ್‌ಎಸ್‌ಎಫ್ ಬಿಡುಗಡೆಗೊಳಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

ಮಾಧ್ಯಮ ಸ್ವಾತಂತ್ರ್ಯದ ವಿರುದ್ಧದ ಆಕ್ರಮಣ ಪ್ರಕ್ರಿಯೆಯ ಹಿಂದಿರುವ ಸರ್ವಾಧಿಕಾರಿ ಶಕ್ತಿಗಳು ಸೈನ್ಯ, ಅಧೀನ ವ್ಯಕ್ತಿಗಳು ಮತ್ತು ಹಿಂಬಾಲಕರೊಂದಿಗೆ ಡಿಜಿಟಲ್ ವಿಶ್ವಕ್ಕೂ ತಮ್ಮ ಕಬಂಧಬಾಹುಗಳನ್ನು ವಿಸ್ತರಿಸಿವೆ . ಕೆಲವೊಮ್ಮೆ ಅವರ ಸಹಚರರು ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ತಮ್ಮ ಕರಾಮತ್ತು ತೋರಿಸುತ್ತಾರೆ. ಪತ್ರಿಕೋದ್ಯಮವನ್ನು ನಿಗ್ರಹಿಸುವ ಆಯುಧವು ವಿದೇಶದಿಂದ ಅವರಿಗೆ ತಲುಪದಂತೆ ನೋಡಿಕೊಳ್ಳುವ ಮೂಲಕ ನಿರಂಕುಶ ಪ್ರಭುತ್ವಗಳನ್ನು ವಿರೋಧಿಸಬಹುದು ಎಂದು ಆರ್‌ಎಸ್‌ಎಫ್ ಪ್ರಧಾನ ಕಾರ್ಯದರ್ಶಿ ಕ್ರಿಸ್ಟೋಫರ್ ಡೆಲಾಯರ್ ಹೇಳಿದ್ದಾರೆ.

ಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ ನೀಡುವ ಎರಡು ವಿಶಿಷ್ಟ ವಿಧಾನಗಳೆಂದರೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡುವುದು ಮತ್ತು ಅತ್ಯಾಚಾರ ಹಾಗೂ ಕೊಲೆಯ ಬೆದರಿಕೆ ಒಡ್ಡುವುದಾಗಿದೆ. ಭಾರತೀಯ ಪತ್ರಕರ್ತೆಯರಾದ ರಾಣಾ ಅಯ್ಯೂಬ್ ಮತ್ತು ಸ್ವಾತಿ ಚತುರ್ವೇದಿ ಅವರ ಪ್ರಕರಣಗಳು ಇಲ್ಲಿ ಪ್ರಮುಖವಾಗಿವೆ ಎಂದು ಆರ್‌ಎಸ್‌ಎಫ್ ತಿಳಿಸಿದೆ. 2002ರ ಗುಜರಾತ್ ಹಿಂಸಾಚಾರದ ಬಗ್ಗೆ ಪುಸ್ತಕ ಬರೆದಿದ್ದ ಹಿನ್ನೆಲೆಯಲ್ಲಿ ತನಗೆ ಆನ್‌ಲೈನ್ ಮೂಲಕ ನಿಂದನೆ ಮತ್ತು ಬೆದರಿಕೆ ಒಡ್ಡಲಾಗುತ್ತಿದೆ ಎಂದು ಅಯೂಬ್ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಯ್ಯೂಬ್ ರಿಗೆ ಭದ್ರತೆ ಒದಗಿಸುವಂತೆ ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿ ಭಾರತ ಸರಕಾರವನ್ನು ಆಗ್ರಹಿಸಿತ್ತು.

 ‘ಐ ಆ್ಯಮ್ ಎ ಟ್ರೋಲ್-ಇನ್‌ಸೈಡ್ ದಿ ಸೀಕ್ರೆಟ್ ವರ್ಲ್ಡ್ ಆಫ್ ಬಿಜೆಪೀಸ್ ಡಿಜಿಟಲ್ ಆರ್ಮಿ’ ಎಂಬ ಪುಸ್ತಕ ಬರೆದಿದ್ದ ಸ್ವಾತಿ ಚತುರ್ವೇದಿಗೆ ಆನ್‌ಲೈನ್‌ನಲ್ಲಿ ನಿರಂತರ ಕೊಲೆ ಬೆದರಿಕೆ ಒಡ್ಡಲಾಗಿತ್ತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿ 2019ರ ಫೆಬ್ರವರಿಯಲ್ಲಿ ವಿಶ್ವಸಂಸ್ಥೆಯ 5 ವಿಶೇಷ ವರದಿಗಾರರು ಭಾರತ ಸರಕಾರಕ್ಕೆ ಪತ್ರ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News