ಮತದಾನದ ಹಕ್ಕಿಗೆ ಸೀಮಿತವಾದ ‘ಸಮಾಜವಾದ’: ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ

Update: 2020-03-13 16:13 GMT

ಬೆಂಗಳೂರು, ಮಾ. 13: ಸಂವಿಧಾನದ ಪೀಠಿಕೆಯಲ್ಲೆ ‘ಸಮಾಜವಾದ’ ಎಂಬ ಪದ ಸೇರಿಸಲಾಗಿದೆ. ಆದರೆ, ದೇಶದ ಜನರಿಗೆ ಮತದಾನದ ಹಕ್ಕನ್ನು ಹೊರತುಪಡಿಸಿ ಸಮಾಜವಾದ ಆಶಯ ಈಡೇರಿಸುವ ಶಿಕ್ಷಣ, ಆರೋಗ್ಯ ಸೇರಿ ಯಾವುದೇ ಹಕ್ಕನ್ನು ನೀಡಿಲ್ಲ. ಎಲ್ಲವೂ ಖಾಸಗಿ ಒಡೆತನದಲ್ಲಿದ್ದು, ಅಸಮಾನತೆ ಹಾಗೆಯೇ ಇದೆ ಎಂದು ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಸಂವಿಧಾನದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವರಿಗೆ ಒಂದು ಶಿಕ್ಷಣ-ಆಸ್ಪತ್ರೆ, ಉಳ್ಳವರಿಗೆ ಇನ್ನೊಂದು ರೀತಿಯ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಇರುವುದು ಸಮಾಜವಾದಿ ತತ್ವಕ್ಕೆ ವಿರುದ್ಧ ಎಂದು ಆಕ್ಷೇಪಿಸಿದರು.

ಸರ್ವಾಧಿಕಾರ: ಪ್ರಜಾಪ್ರಭುತ್ವದ ದೇಶದ ಅಸ್ತಿತ್ವ ಅಲುಗಾಡುತ್ತಿದ್ದು, ಪ್ರಜಾಸತ್ತೆ ಅಳವಡಿಸಿಕೊಂಡು ಸಂವಿಧಾನದಡಿಯಲ್ಲಿ ಸಾಗುತ್ತಿರುವ ರಾಷ್ಟ್ರಗಳು ಸರ್ವಾಧಿಕಾರಕ್ಕೆ ಸಿಲುಕುತ್ತಿವೆ ಎಂದು ಆತಂಕಪಟ್ಟ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡಮೇಲು ಮಾಡುವ ಕೃತ್ಯಗಳು ಗೋಚರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

2005ರಿಂದ ಈಚೆಗೆ ಅಧಿಕಾರ ಮತ್ತು ಆರ್ಥಿಕ ಕೇಂದ್ರಿತ ವ್ಯವಸ್ಥೆ ಬಹುಮತ ಆಧಾರಿತ ಪ್ರಜಾಪ್ರಭುತ್ವ ಸ್ಥಾಪನೆ ಅಪಾಯಕಾರಿ ಎಂದು ಎಚ್ಚರಿಸಿದ ಅವರು, ಏಕರೂಪದ ಬಹುಮತ, ಅಧಿಕಾರ, ಸಂಪನ್ಮೂಲ ಕೇಂದ್ರೀಕೃತ ವ್ಯವಸ್ಥೆ ಪ್ರಜಾಪ್ರಭುತ್ವದ ಸಮತೋಲನವನ್ನು ತಪ್ಪಿಸಿ ಪತನಕ್ಕೆ ಕಾರಣವಾಗುತ್ತಿದೆ ಎಂದು ನುಡಿದರು.

ಪ್ರಗತಿಪರ ಆಶಯ: ಡಾ.ಬಿ.ಆರ್.ಅಂಬೇಡ್ಕರ್ ಪ್ರಗತಿಪರ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ್ದರು. ಆದರೆ, ಇಂದು ಬಹುಸಂಖ್ಯಾತ ಪ್ರಜಾಪ್ರಭುತ್ವದ ಕಡೆಗೆ ನಾವು ಹೊರಳುತ್ತಿದ್ದೇವೆ ಎಂದ ಅವರು, ಇದನ್ನು ಸಮತೋಲನ ಮಾಡಿಕೊಂಡು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಬೇಕೆಂದು ಸಲಹೆ ನೀಡಿದರು.

ಮುದ್ದೆ-ಸಾರು: ‘ಮೊನ್ನೆ ನಮ್ಮ ಮನೆಯಲ್ಲಿ ತಾಯಿ ಊಟ ಬಡಿಸುವ ವೇಳೆ ನಗೆ ಬೀರಿದರು. ನಾನು ಏಕೆ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು, 40 ವರ್ಷದ ಹಿಂದೆ ಅವರ ನನ್ನ ತಂದೆ ವಿಧಾನಸಭೆಯಿಂದ ಬಂದಾಗ ಅವರಿಗೆ ಮುದ್ದೆ-ಸಾರು ಊಟ ಬಡಿಸಿದ್ದೆ. ಅದೇ ರೀತಿ 30 ವರ್ಷಗಳ ಹಿಂದೆ ನನ್ನ ಮಾವ, 25 ವರ್ಷದ ಹಿಂದೆ ನನ್ನ ಪತಿ ಬಚ್ಚೇಗೌಡ ಸದನದಿಂದ ಮನೆಗೆ ಬಂದಾಗ ಮುದ್ದೆ, ಉಪ್ಪುಸಾರು ಊಟ ಬಡಿಸಿದ್ದೆ. ಈಗ ನೀನು ಸದನದಿಂದ ಬಂದಿದ್ದೀಯ, ನಿನಗೂ ಅದೇ ಊಟ ಬಡಿಸುತ್ತಿದ್ದೇನೆಂದು ಹಳೆಯದನ್ನು ಮೆಲುಕು ಹಾಕಿ ನಗು ಬಂತು ಎಂದರು. ಮಹಿಳಾ ದಿನದ ಸಂದರ್ಭದಲ್ಲಿ ಪುರುಷರ ಯಶಸ್ಸಿನ ಹಿಂದೆ ಮಹಿಳೆಯರು ಇರುತ್ತಾರೆ. ಅವರ ತ್ಯಾಗಕ್ಕೆ ಸಾಟಿಯೇ ಇಲ್ಲ ಎಂದು ನೆನಪು ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News