'ಶಿಕ್ಷಿತರೇ ಮತವನ್ನು ಹಣಕ್ಕೆ ಮಾರಿಕೊಳ್ಳುವ ಸ್ಥಿತಿ': ಮೇಲ್ಮನೆಯಲ್ಲಿ ಗಂಭೀರ ಚರ್ಚೆ

Update: 2020-03-13 17:28 GMT

ಬೆಂಗಳೂರು, ಮಾ.13: ರಾಜ್ಯದಲ್ಲಿ ಮೌಲ್ಯಾಧಾರಿತ ರಾಜಕಾರಣ ಮರೆಯಾಗುತ್ತಿದ್ದು, ಶಿಕ್ಷಿತರೇ ಮತವನ್ನು ಹಣಕ್ಕೆ ಮಾರಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಮಾತು ಮೇಲ್ಮನೆಯಲ್ಲಿ ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು.

ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಸಂವಿಧಾನದ ಮೇಲೆ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಶಿಕ್ಷಣ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೂರು ಪಕ್ಷಗಳಿಂದಲೂ ಹಣ ಪಡೆದು, ಒಬ್ಬರಿಗೆ ಮತ ಹಾಕುತ್ತಾರೆ. ಶಿಕ್ಷಿತರೇ ಹೀಗಾದರೆ, ಸಾಮಾನ್ಯರ ಸ್ಥಿತಿ ಏನಾಗಬೇಕು ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಸಿ.ಟಿ.ರವಿ ಮಾತನಾಡಿ, ಲಕ್ಷಗಟ್ಟಲೇ ವೇತನ ಪಡೆಯುವಂತಹ ಪದವೀಧರರು ಸಾವಿರ, ಎರಡು ಸಾವಿರಕ್ಕೆ ಮತ ಮಾರಿಕೊಳ್ಳುತ್ತಾರೆ. ಯುಜಿಸಿ ಅಡಿಯಲ್ಲಿ ವೇತನ ಪಡೆದರೂ, ಮತಕ್ಕೆ ಹಣ ಪಡೆಯುತ್ತಾರೆ ಎಂದರೆ ಯಾವ ಹಂತಕ್ಕೆ ಬಂದಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಹಣ ಪಡೆದು ಮತ ಹಾಕುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು.

ಕಾಂಗ್ರೆಸ್‌ನ ಎಸ್.ರವಿ ಮಾತನಾಡಿ, ಕಾಂಗ್ರೆಸ್‌ನವರ ಹತ್ತಿರ ಮತಕ್ಕೆ 10 ಸಾವಿರ ಪಡೆಯುತ್ತಾರೆ. ಅನಂತರ ಮತದಾನ ಕೇಂದ್ರದ ಬಳಿ ಹೋಗಿ ಮತ ಹಾಕಿದ್ದನ್ನು ಫೋಟೋ ತೆಗೆದುಕೊಂಡು ಬಂದು ಜೆಡಿಎಸ್‌ನವರಿಂದ 10 ಸಾವಿರ ಹಾಗೂ ನಕಲಿ ಮತಪತ್ರ ತಂದು ತೋರಿಸಿ ಬಿಜೆಪಿಯವರಿಂದ 25 ಸಾವಿರ ಪಡೆಯುತ್ತಾರೆ. ಇಂತಹ ಅನೇಕ ಉದಾಹರಣೆಗಳಿವೆ ಎಂದು ಹೇಳಿದರು.

ಜೆಡಿಎಸ್‌ನ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿ, ನಾವೆಲ್ಲ ಎಲ್ಲವನ್ನೂ ಮಾತನಾಡುತ್ತೇವೆ. ಆದರೆ, ಕಾರ್ಯರೂಪಕ್ಕೆ ತರುವುದಿಲ್ಲ. ಹೀಗಾಗಿ, ನಾವು ಹಣವನ್ನು ನೀಡುವುದನ್ನೇ ನಿಲ್ಲಿಸಬೇಕಿದೆ ಎಂದರು. ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ನಾರಾಯಣಸ್ವಾಮಿ, ಇತ್ತೀಚಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೋಗಿದ್ದೆ. ಅಲ್ಲಿ ಮಧ್ಯಾಹ್ನ ಮೂರು ಗಂಟೆಯಾದರೂ ಯಾರೊಬ್ಬರೂ ಮತ ಹಾಕಿಲ್ಲ. ಯಾಕೆಂದು ಕೇಳಿದರೆ, ಒಬ್ಬರು ಬಂದಿದ್ದಾರೆ, ಇನ್ನೆರಡು ಪಕ್ಷಗಳವರು ಬರಬೇಕು ಎಂದ ಘಟನೆಯನ್ನು ನೆನಪಿಸಿಕೊಂಡರು.

ಈ ನಡುವೆ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, 2004 ರಲ್ಲಿ ನನ್ನ ಬಳಿ ಇದ್ದ ಹಣ, ಸ್ನೇಹಿತರ ಬಳಿಯಿದ್ದ ಹಣದಿಂದ ಚುನಾವಣೆಯಲ್ಲಿ ಗೆದ್ದೆ. 2016 ರಲ್ಲಿ 5 ಎಕರೆ ಜಮೀನು ಮಾರಾಟ ಮಾಡಬೇಕಾಯಿತು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಅಲ್ಲದೆ, ಚುನಾವಣಾ ಅಭ್ಯರ್ಥಿಗಳ ಸಂಪೂರ್ಣ ಜವಾಬ್ದಾರಿಯನ್ನು ಚುನಾವಣಾ ಆಯೋಗ ಹೊರಬೇಕು ಎಂದರು.

ಈ ವೇಳೆ ಆಡಳಿತ ಪಕ್ಷದ ಮುಖ್ಯ ಸಚೇತಕ ಆಯನೂರು ಮಂಜುನಾಥ್ ಮಾತನಾಡಿ, ತಿದ್ದಬೇಕಾದ ಸ್ಥಳದಲ್ಲಿರುವ ನಾವುಗಳು, ಆ ಕೆಲಸ ಮಾಡುತ್ತಿಲ್ಲ. ಈ ಸದನಗಳಿಂದ ಮೇಲಿನ ಸದನಗಳಿಗೆ ಆರಿಸುವಾಗ ಭ್ರಷ್ಟಾಚಾರ ನಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಇದರ ನಡುವೆ ಸಚಿವ ಸಿ.ಟಿ.ರವಿ ಮಧ್ಯಪ್ರವೇಶಿಸಿ ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವುದು ಹೇಗೆ ಎಂಬುದನ್ನು ಕಲಿಸಲು ಒಂದು ವಿಶ್ವವಿದ್ಯಾಲಯ ಸ್ಥಾಪಿಸೋಣ ಎಂದು ಹೇಳಿದರು. ಈ ನಡುವೆ, ಕಾಂಗ್ರೆಸ್‌ನ ಐವನ್ ಡಿಸೋಜ, ವೈ.ಎ.ನಾರಾಯಣಸ್ವಾಮಿಯನ್ನು ಕುಲಪತಿ ಮಾಡೋಣ ಎಂದರು. ಆಗ ಸಿ.ಟಿ.ರವಿ, ನಾರಾಯಣಸ್ವಾಮಿ ಬೇಡ ಪುಟ್ಟಣ್ಣರನ್ನು ಮಾಡೋಣ ಎಂದು ಚಟಾಕಿ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News