ಮರುವಿಂಗಡಣೆ, ಮೀಸಲು ನಿಗದಿ ವಿಳಂಬವಾದರೆ ಪ್ರತಿ ದಿನ 5 ಲಕ್ಷ ರೂ. ದಂಡ: ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಕೆ

Update: 2020-03-13 18:35 GMT

ಬೆಂಗಳೂರು, ಮಾ.13: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) 198 ವಾರ್ಡ್‌ಗಳ ಮರುವಿಂಗಡಣೆ ಹಾಗೂ ಮೀಸಲು ನಿಗದಿ ಮಾ.31ರೊಳಗೆ ಪೂರ್ಣಗೊಳಿಸಬೇಕು. ತಡವಾದರೆ ಎ.1ರಿಂದ ದಿನಕ್ಕೆ 5 ಲಕ್ಷ ರೂ.ದಂಡವನ್ನು ರಾಜ್ಯ ಸರಕಾರ ಚುನಾವಣಾ ಆಯೋಗಕ್ಕೆ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿ, ವಿಚಾರಣೆಯನ್ನು ಮುಂದೂಡಿದೆ. 

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಎಚ್ಚರಿಕೆ ನೀಡಿತು.

ಸರಕಾರದ ಪರ ವಾದಿಸಿದ ವಕೀಲ ಶ್ರೀನಿಧಿ ಅವರು, ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಮಾ.18ಕ್ಕೆ ಮುಗಿಯಲಿದ್ದು, ಬಳಿಕ ವಾರ್ಡ್ ವಾರು ಮೀಸಲು ನಿಗದಿಪಡಿಸಲಾಗುವುದು. ಆ ಬಗ್ಗೆ ವಿವರಣೆ ನೀಡಲು ಸಮಯಾವಕಾಶಬೇಕೆಂದು ಪೀಠಕ್ಕೆ ತಿಳಿಸಿದರು.

ಕೆಲಕಾಲ ವಕೀಲರ ವಾದ ಆಲಿಸಿದ ನ್ಯಾಯಪೀಠವು ವಾರ್ಡ್‌ಗಳ ಮರುವಿಂಗಡಣೆ ಹಾಗೂ ಮೀಸಲು ನಿಗದಿ ಮಾ.31ರೊಳಗೆ ಪೂರ್ಣಗೊಳಿಸಬೇಕೆಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News