‘ಕೇಡರ್ ಬೇಸ್’ನಿಂದ ಕಾರ್ಯಕರ್ತರನ್ನು ಸಂಘಟಿಸುತ್ತೇವೆ: ಡಿ.ಕೆ.ಶಿವಕುಮಾರ್

Update: 2020-03-16 13:09 GMT

ಬೆಂಗಳೂರು, ಮಾ.16: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲವರ್ಧನೆ ಸಂಬಂಧ ಹೆಚ್ಚಿನ ಜವಾಬ್ದಾರಿ ನಮ್ಮ ಮೇಲಿದ್ದು, ಇದಕ್ಕಾಗಿ ‘ಕೇಡರ್ ಬೇಸ್’ನಿಂದ ಕಾರ್ಯಕರ್ತರನ್ನು ಸಂಘಟಿಸಲಾಗುವುದು ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ನಗರದ ರೇಸ್‌ಕೋರ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇದೇ ಮೊಲದ ಬಾರಿಗೆ ಪಕ್ಷದ ಕಾರ್ಯಾಧ್ಯಕ್ಷರೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರಿಗೆ ಉತ್ಸಾಹ ಬರುವ ರೀತಿ ಕೆಲಸ ಮಾಡಬೇಕಿದೆ. ತಳಮಟ್ಟದಿಂದ ಪಕ್ಷ ಕಟ್ಟಲು ನಾವು ತೀರ್ಮಾನ ಮಾಡಿದ್ದೇವೆ. ಹೀಗಾಗಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗುತ್ತೇವೆ. ಅಷ್ಟೇ ಅಲ್ಲದೆ, ಕಾರ್ಯಕರ್ತರು, ನಾಯಕರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ನಂಬಿಕೆ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ನುಡಿದರು.

ದೇಶದ ಎಲ್ಲ ಕಡೆ ಬಿಜೆಪಿಗೆ ಅಧಿಕಾರ ಕೊಟ್ಟಿದ್ದರೂ, ಅವರಿಗೆ ಅದು ಸಾಲುತ್ತಿಲ್ಲ. ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷದ ನಾಯಕರನ್ನು ಸೆಳೆಯುತ್ತಿದೆ ಎಂದು ಆರೋಪಿಸಿದ ಅವರು, ಜಾತಿ, ನೀತಿ ಮೇಲೆ ನಾನು ಮಾತನಾಡಲ್ಲ. ಎಲ್ಲ ಸಮುದಾಯಗಳ ಬಗ್ಗೆಯೂ ಒತ್ತು ನೀಡುತ್ತೇವೆ. ಶಿಸ್ತು ಪಾಲನೆಗೆ ಮೊದಲ ಆದ್ಯತೆ ಎಂದರು. ಪಕ್ಷದ ಹೈಕಮಾಂಡ್ ನನ್ನನ್ನು ಅಧ್ಯಕ್ಷರನ್ನಾಗಿ ಹಾಗೂ ಮೂವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದು ನಮಗೆ ಕೊಟ್ಟಿರುವ ಅಧಿಕಾರ ಅಲ್ಲ, ಜವಾಬ್ದಾರಿ. ಹೊಸ ತಂಡದಿಂದ ಕಾಂಗ್ರೆಸ್ ಪಕ್ಷದ ಬಲವರ್ಧನೆ ಮಾಡಲು ನಮಗೆ ಅವಕಾಶ ಕೊಟ್ಟಿದ್ದಾರೆ. ಇನ್ನು, ವಿಧಾನಸಭೆ ಕಲಾಪ ಹಾಗೂ ಸಂಸತ್ ಅಧಿವೇಶನ ಮುಗಿದ ನಂತರ ಮೂವರು ಕಾರ್ಯಾಧ್ಯಕ್ಷರ ಜೊತೆ ಪಕ್ಷದ ಪ್ರಮುಖ ನಾಯಕರ ಜೊತೆ ದೆಹಲಿಗೆ ಹೋಗುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಕೈ ಮುಗಿಯುತ್ತೇನೆ, ಹೊರಕ್ಕೆ ಹೋಗಿ...!

ಇದೇ ಮೊದಲ ಬಾರಿಗೆ ರೇಸ್‌ಕೋರ್ಸ್ ರಸ್ತೆಯ ಕೆಪಿಸಿಸಿ ಕಚೇರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಕಾರ್ಯಕರ್ತರು, ಪಕ್ಷದ ಮುಖಂಡರು ಅಭಿನಂದನೆ ಸಲ್ಲಿಸಿದರು. ತದನಂತರ, ಸುದ್ದಿಗೋಷ್ಠಿ ನಡೆಯುತ್ತಿದ್ದ ಕೊಠಡಿಗೂ ಕಾರ್ಯಕರ್ತರು ಧಾವಿಸಿದರು. ಆಗ ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಎದ್ದು ನಿಂತು, ಕಾರ್ಯಕರ್ತರ ಕಡೆ ಕೈ ಮುಗಿದು, ದಯವಿಟ್ಟು ಹೊರಕ್ಕೆ ಹೋಗಿ ಎಂದು ಅವರು ಹೊರಗೆ ಕಳುಹಿಸಿದ ಪ್ರಸಂಗ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News