ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೊ ಮುಳಕ್ಕಲ್ ಅರ್ಜಿ ತಿರಸ್ಕೃತ

Update: 2020-03-16 14:19 GMT

ತಿರುವನಂತಪುರಂ, ಮಾ.16: ಕ್ರೈಸ್ತ ಸನ್ಯಾಸಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಷಪ್ ಫ್ರಾಂಕೊ ಮುಳಕ್ಕಲ್ ಪ್ರಕರಣದಿಂದ ದೋಷಮುಕ್ತಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳದ ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ.

ತನ್ನ ವಿರುದ್ಧ ದೋಷಾರೋಪ ಹೊರಿಸುವ ಯಾವುದೇ ಪ್ರಕರಣ ಮೇಲ್ನೋಟಕ್ಕೆ ಕಂಡುಬಂದಿಲ್ಲ. ಆದ್ದರಿಂದ ದೋಷಮುಕ್ತಗೊಳಿಸಬೇಕು ಎಂದು ಬಿಷಪ್ ಕೋರಿದ್ದರು. ಆದರೆ ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ವಿಚಾರಣೆ ಎದುರಿಸಲೇಬೇಕು ಎಂದು ವಿಚಾರಣಾ ನ್ಯಾಯಾಲಯ ತಿಳಿಸಿದೆ.

ಈ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಬಿಷಪ್ ಅವರ ವಕೀಲರು ಹೇಳಿದ್ದಾರೆ. ಅತ್ಯಾಚಾರ ಪ್ರಕರಣದ ಪ್ರಾಥಮಿಕ ವಿಚಾರಣೆ ಜನವರಿಯಲ್ಲಿ ಆರಂಭಗೊಂಡಿದ್ದು ಇದಕ್ಕೆ ಕೆಲ ದಿನಗಳ ಹಿಂದೆ ಬಿಷಪ್ ಅರ್ಜಿ ಸಲ್ಲಿಸಿದ್ದರು. 2014ರಿಂದ 2016ರ ಅವಧಿಯಲ್ಲಿ ಬಿಷಪ್ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದರು ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು 2018ರಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಷಪ್‌ರನ್ನು ವಿಶೇಷ ತನಿಖಾ ತಂಡ ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News