'ಅಂಬೇಡ್ಕರ್‌ಗೆ ಭಾರತ ರತ್ನ'ದ ಬಗ್ಗೆ ಮೇಲ್ಮನೆಯಲ್ಲಿ ವಾಗ್ವಾದ

Update: 2020-03-16 14:42 GMT

ಬೆಂಗಳೂರು, ಮಾ.16: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಭಾರತರತ್ನ ನೀಡದ ಕುರಿತು ವಿಧಾನಪರಿಷತ್‌ನಲ್ಲಿ ಕೆಲಕಾಲ ಚರ್ಚೆಗೆ ನಾಂದಿ ಹಾಡಿತು.

ಸೋಮವಾರ ವಿಧಾನ ಪರಿಷತ್‌ನಲ್ಲಿ ಸಂವಿಧಾನದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪುರ ವಿಷಯ ಪ್ರಸ್ತಾಪಿಸಿ ಮಾತನಾಡುತ್ತಿದ್ದ ವೇಳೆ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅಂಬೇಡ್ಕರ್‌ಗೆ ತಮ್ಮ ಅಧಿಕಾರದ ಅವಧಿಯಲ್ಲಿ ಭಾರತರತ್ನ ನೀಡಲು ಆಗಲಿಲ್ಲ. ಈಗ ಅವರನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದಕ್ಕೆ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಪ್ರತಿಕ್ರಿಯಿಸಿ, ನಮ್ಮ ಜತೆ ಇದ್ದವರು ನೀವು. ಆ ಕಡೆ ಹೋಗಿ ಎಷ್ಟು ಮಾತನಾಡುತ್ತೀಯಾ ಎಂದರು.

ಆಗ ಸುಧಾಕರ್, ನಾವು ಎಲ್ಲಿದ್ದೇವೆ ಎಂಬುದು ಮುಖ್ಯವಲ್ಲ. ಇತಿಹಾಸ ಎಂದಿಗೂ ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು. ಆಗ ಬಿಜೆಪಿಯ ಪ್ರಾಣೇಶ್, ಅಂಬೇಡ್ಕರ್ ಬಗ್ಗೆ ಮಾತನಾಡಲು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲ ಎಂದು ಟೀಕಿಸಿದರು.

ಬಿಜೆಪಿಯ ರವಿಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷವಿದ್ದಾಗ ಅವರಿಗೆ ಭಾರತರತ್ನ ನೀಡಲಿಲ್ಲ. ಕೇವಲ ಗಾಂಧೀ ಕುಟುಂಬದವರಿಗೆ ಅಷ್ಟೇ ನೀಡಿದರು. ಅಂಬೇಡ್ಕರ್ ಮರಣ ಹೊಂದಿದಾಗ, ಅವರ ಮೃತ ದೇಹ ಸಾಗಿಸಲು ಸಹಾಯ ಮಾಡಲಾಗಲಿಲ್ಲ ಎಂದು ತಿಳಿಸಿದರು. ಆಗ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ, ಅಂಬೇಡ್ಕರ್‌ಗೆ ಭಾರತ ರತ್ನಕ್ಕಿಂತಲೂ ಅಧಿಕ ಗೌರವವನ್ನು ದೇಶದ ಜನ ನೀಡುತ್ತಿದ್ದಾರೆ ಎಂದು ಹೇಳಿದರು. ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಆತ್ಮವಂಚನೆ ಮಾಡಿಕೊಂಡು ಮಾತನಾಡಬಾರದು ಎಂದು ತಿಮ್ಮಾಪುರ್ ಅವರ ಕಾಲೆಳೆದರು. ಆಗ ಎದ್ದು ನಿಂತ ವಿರೋಧ ಪಕ್ಷದ ನಾಯಕ ಪಾಟೀಲ್, ಆರೂವರೆ ಕೋಟಿ ಜನರು, ತುಮಕೂರಿನ ಡಾ.ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಕೇಳಿಕೊಂಡರೂ ನೀಡಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಚಿವ ಸುಧಾಕರರ್, ಅಸ್ಪೃಶ್ಯರನ್ನು ದೇಶದ ರಾಷ್ಟ್ರಪತಿ ಮಾಡಿದ್ದೇವೆ. ಹಿಂದುಳಿದ ಜನಾಂಗದವರನ್ನು ಪ್ರಧಾನಿ ಮಾಡಿದ್ದೇವೆ. ಆದರೆ, ಕಾಂಗ್ರೆಸ್‌ನವರ ಆಡಳಿತದಲ್ಲಿ ಯಾರನ್ನಾದರೂ ಹಿಂದುಳಿದ ಸಮುದಾಯಕ್ಕೆ ಸೇರಿದವರಿಗೆ ಅಧಿಕಾರ ನೀಡಿದ್ದೀರಾ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News