ಸದನದಲ್ಲಿ ಪ್ರತಿಧ್ವನಿಸಿದ ‘ಐಎಂಎ ಪ್ರಕರಣ’: ವಿಶೇಷ ನ್ಯಾಯಾಲಯ ಸ್ಥಾಪನೆಗೆ ರಿಝ್ವಾನ್ ಅರ್ಶದ್ ಆಗ್ರಹ

Update: 2020-03-17 15:11 GMT

ಬೆಂಗಳೂರು, ಮಾ.17: ಐಎಂಎ ಸಂಸ್ಥೆಯು ಜನಸಾಮಾನ್ಯರ ಸಾವಿರಾರು ಕೋಟಿ ರೂ.ಗಳನ್ನು ಲೂಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ನಡೆಸಬೇಕು ಎಂದು ಕಾಂಗ್ರೆಸ್ ಸದಸ್ಯ ರಿಝ್ವಾನ್ ಅರ್ಶದ್ ಆಗ್ರಹಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಡೆದ ಸಾರ್ವಜನಿಕ ಮಹತ್ವದ ವಿಷಯದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶೇಷ ನ್ಯಾಯಾಲಯಕ್ಕೆ ನ್ಯಾಯಮೂರ್ತಿಗಳು ಹಾಗೂ ಅಗತ್ಯ ಸಿಬ್ಬಂದಿಗಳನ್ನು ಸರಕಾರ ನೇಮಕ ಮಾಡಿ, ಕೆಪಿಐಡಿ ಕಾಯ್ದೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಲೇವಾದೇವಿ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ ಈ ಪ್ರಕರಣದ ವಿಚಾರಣೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಐಎಂಎ ರೀತಿಯಲ್ಲೆ ಸುಮಾರು 8-9 ಬೇರೆ ಬೇರೆ ಸಂಸ್ಥೆಗಳು ಸುಮಾರು ಒಂದು ಲಕ್ಷ ಜನರಿಂದ ಸಾವಿರಾರು ಕೋಟಿ ರೂ.ಗಳನ್ನು ಹೂಡಿಕೆ ಮಾಡಿಕೊಂಡು ವಂಚನೆ ಮಾಡಿ ಪರಾರಿಯಾಗಿವೆ. ಐಎಂಎ ಸಂಸ್ಥೆಯ ಕೇಂದ್ರ ಕಚೇರಿ ನನ್ನ ಶಿವಾಜಿನಗರ ಕ್ಷೇತ್ರದಲ್ಲಿತ್ತು. ಅಲ್ಲಿನ ಜನರೇ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಬಡವರು, ಆಟೋಚಾಲಕರು, ಶಿಕ್ಷಕರು, ಗೃಹಿಣಿಯರು, ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ಮನೆ, ಆಸ್ತಿ ಪಾಸ್ತಿಗಳನ್ನು ಮಾರಾಟ ಮಾಡಿ ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ. ಮಕ್ಕಳ ಭವಿಷ್ಯ ರೂಪಿಸಲು, ಶಿಕ್ಷಣ, ವ್ಯಾಪಾರ, ಮದುವೆ ಇತ್ಯಾದಿಗಳಿಗಾಗಿ ಹಣ ಹೂಡಿಕೆ ಮಾಡಿದ್ದರು. ಈ ಸಂಸ್ಥೆ ವಂಚನೆ ಮಾಡಿರುವ ಸುದ್ದಿ ಕೇಳಿ ಹಲವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆಗಳು ಜರುಗಿವೆ ಎಂದು ರಿಝ್ವಾನ್ ಅರ್ಶದ್ ತಿಳಿಸಿದರು.

ರಾಜ್ಯ ಸರಕಾರ ಈ ಪ್ರಕರಣದಲ್ಲಿ ಯಾಕೋ ಗಂಭೀರವಾಗಿರುವಂತೆ ಕಾಣುತ್ತಿಲ್ಲ. ಹೂಡಿಕೆದಾರರಿಗೆ ಅವರ ಹಣ ವಾಪಸ್ ಕೊಡಿಸುವ ವಿಚಾರದಲ್ಲಿ ಆಸಕ್ತಿ ಇರುವಂತೆ ಭಾಸವಾಗುತ್ತಿಲ್ಲ ಎಂದು ಟೀಕಿಸಿದ ಅವರು, ಈ ಪ್ರಕರಣದ ಕುರಿತು ರಚಿಸಲಾದ ಸಕ್ಷಮ ಪ್ರಾಧಿಕಾರಕ್ಕೆ ಎರಡೂವರೆ ತಿಂಗಳಾದರೂ ಕಚೇರಿ, ಸಿಬ್ಬಂದಿಯನ್ನು ನೀಡಿರಲಿಲ್ಲ. ಹೈಕೋರ್ಟ್ ನಿರ್ದೇಶನ ಬಂದ ನಂತರ ಕಚೇರಿ ನೀಡಲಾಯಿತು ಎಂದರು.

ಕಳೆದ ತಿಂಗಳು ವಿಶೇಷ ನ್ಯಾಯಾಲಯ ಸ್ಥಾಪನೆ ವಿಚಾರದ ಕುರಿತು ಕಾನೂನು ಸಚಿವರಿಗೆ ಪತ್ರ ಬರೆದಿದ್ದೆ. ಆದರೆ, ಈವರೆಗೆ ಅದಕ್ಕೆ ಉತ್ತರ ಬಂದಿಲ್ಲ. ಈ ಪ್ರಕರಣದ ವಿಚಾರಣೆ ತಡವಾದರೆ ಬಡವರಿಗೆ ಅನ್ಯಾಯವಾಗುತ್ತದೆ ಎಂದು ರಿಝ್ವಾನ್ ಅರ್ಶದ್ ಹೇಳಿದರು.

ಐಎಂಎ ಸಂಸ್ಥೆ ಆದಾಯವೆ ಇಲ್ಲದೆ 123 ಕೋಟಿ ರೂ.ಆದಾಯ ತೆರಿಗೆ ಪಾವತಿ ಮಾಡಿದೆ. ಅದೆಲ್ಲ ಬಡವರ ಹಣ. ಈ ವಿಚಾರದ ಕುರಿತು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು, ಆ ಹಣವನ್ನು ವಾಪಸ್ ಪಡೆಯುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಈಗಾಗಲೆ ಐಎಂಎ ಸಂಸ್ಥೆಗೆ ಸೇರಿದ್ದು ಎನ್ನಲಾದ ಆಸ್ತಿಗಳನ್ನು ಗುರುತು ಮಾಡಲಾಗಿದೆ. ಉತ್ತರಪ್ರದೇಶ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲೂ ಆಸ್ತಿಗಳಿವೆ ಎಂಬ ಮಾಹಿತಿಗಳು ಬರುತ್ತಿವೆ. ಸರಕಾರ ಆದಷ್ಟು ಬೇಗ ಈ ಎಲ್ಲ ಆಸ್ತಿಗಳನ್ನು ಜಪ್ತಿ ಮಾಡಿ, ಬಡವರಿಗೆ ಹಣ ವಾಪಸ್ ಕೊಡಿಸುವ ಕೆಲಸವನ್ನು ಮಾಡಬೇಕು ಎಂದು ರಿಝ್ವಾನ್ ಅರ್ಶದ್ ಹೇಳಿದರು.

ರಾಜಕೀಯ ನಾಯಕರೊಬ್ಬರು ಐಎಂಎ ನೆರವಿನೊಂದಿಗೆ ಹಜ್‌ಕ್ಯಾಂಪ್, ಕವಿಗೋಷ್ಠಿ(ಮುಷಾಯಿರಾ) ಸೇರಿದಂತೆ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಅವರ ಸಂಸ್ಥೆಗೆ ಪ್ರಚಾರ ನೀಡಿದರು. ಮುಖ್ಯಮಂತ್ರಿ, ಸಚಿವರನ್ನು ಅವರ ಕಚೇರಿಗೆ ಕರೆದುಕೊಂಡು ಹೋಗಿ ಆ ಸಂಸ್ಥೆಯ ಮೇಲೆ ಜನರ ವಿಶ್ವಾಸ ಬರುವಂತೆ ಮಾಡಿದ್ದರು ಎಂದು ಪರೋಕ್ಷವಾಗಿ ರೋಷನ್ ಬೇಗ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಜೊತೆ ಸ್ನೇಹ ಹಸ್ತ ಚಾಚಿರುವ ಆ ನಾಯಕ, ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ನನಗೆ ಏನು ಮಾಡಲು ಸಾಧ್ಯವಿಲ್ಲ. ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಐಡಿ ಕಾಯ್ದೆಯಲ್ಲಿ ಎಲ್‌ಎಲ್‌ಪಿಗಳಿಗೆ ವಿನಾಯಿತಿ ನೀಡಲಾಗಿದೆ. ಸರಕಾರ ಕೆಪಿಐಡಿ ಕಾಯ್ದೆಗೆ ತಿದ್ದುಪಡಿ ತಂದು ಮುಂದಿನ ದಿನಗಳಲ್ಲಿ ಇಂತಹ ಸಂಸ್ಥೆಗಳು ತಲೆ ಎತ್ತದಂತೆ ಕ್ರಮ ಕೈಗೊಳ್ಳಬೇಕು ಎಂದು ರಿಝ್ವಾನ್ ಅರ್ಶದ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News