ಗಲಭೆ ಪ್ರಚೋದಕರಿಗೆ ರಕ್ಷಣೆ ಬೇಡ

Update: 2020-03-18 05:26 GMT

ಕರ್ನಾಟಕದಲ್ಲಿ ಉದ್ರೇಕಕಾರಿ ಭಾಷಣಗಳು ಮತ್ತು ಚಟುವಟಿಕೆಗಳ ಮೂಲಕ ಕೋಮು ಗಲಭೆಗೆ ಪ್ರಚೋದಿಸಿದ 43 ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಬಿಜೆಪಿ ಸರಕಾರ ತೀರ್ಮಾನಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.ರಾಜ್ಯದ ವಿವಿಧ ಕಡೆ ಟಿಪ್ಪು ಜಯಂತಿ, ಸುರೇಶ್ ಮೇಸ್ತ ಮುಂತಾದ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಹಿಂದೆ ಪೊಲೀಸರು ಸಂಘಪರಿವಾರದ ಕೆಲ ನಾಯಕರ ಮೇಲೆ ಖಟ್ಲೆ ದಾಖಲಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಸಿ.ಟಿ.ರವಿ, ಉದಾಸಿ ಸೇರಿದಂತೆ ಕೆಲ ಬಿಜೆಪಿ ಶಾಸಕರು ಈ ಪ್ರಕರಣಗಳನ್ನು ಹಿಂದೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಅದಕ್ಕಾಗಿ ಪಟ್ಟು ಹಿಡಿದಿದ್ದರು. ಈಗ ರಾಜ್ಯದ ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರ ಈ ಪ್ರಕರಣಗಳನ್ನು ವಾಪಸ್ ಪಡೆದಿದೆ.

ಇಂತಹ ಹಿಂಸಾತ್ಮಕ, ಕೋಮು ಪ್ರಚೋದಕ ಪ್ರಕರಣಗಳನ್ನು ವಾಪಸ್ ಪಡೆಯಲು ಪೊಲೀಸ್ ಇಲಾಖೆಯ ಕೆಲ ಉನ್ನತ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಗೃಹ ಇಲಾಖೆ ದಂಗೆ ಪ್ರಚೋದಕರಿಗೆ ಕ್ಲೀನ್ ಚಿಟ್ ನೀಡಿರುವುದು ಖಂಡನೀಯವಾಗಿದೆ.

ಹಿಂದೂ ಜಾಗರಣಾ ವೇದಿಕೆಯ ಜಗದೀಶ್ ಕಾರಂತ, ಕಲ್ಲಡ್ಕ ಪ್ರಭಾಕರ ಭಟ್‌ಮುಂತಾದವರಿಗೆ ಕೋಮು ಕಲಹಕ್ಕೆ ಉದ್ರೇಕಕಾರಿ ಮಾತುಗಳ ಮೂಲಕ ಪ್ರಚೋದನೆ ನೀಡುತ್ತ ಬಂದ ಬಹುದೊಡ್ಡ ಇತಿಹಾಸವೇ ಇದೆ. ಅನೇಕ ಬಾರಿ ಪೊಲೀಸ್ ಇಲಾಖೆ ಇಂತಹ ಪ್ರಕರಣಗಳಲ್ಲಿ ಜಾಣ ಮೌನ ತಾಳುತ್ತದೆ. ಆದರೆ ರಾಜ್ಯದಲ್ಲಿ ಬಿಜೆಪಿಯೇತರ ಸರಕಾರ ಅಸ್ತಿತ್ವದಲ್ಲಿದ್ದರೆ ಇಂತಹ ಹಿಂಸೆ ಪ್ರಚೋದಕ ವ್ಯಕ್ತಿ, ಶಕ್ತಿಗಳ ಮೇಲೆ ಕಟ್ಟು ನಿಟ್ಟಿನ ಕಾನೂನಿನ ಕ್ರಮಕೈಗೊಂಡ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಜಗದೀಶ್ ಕಾರಂತರಂತಹವರು ತಮಗೇನೂ ಆಗುವುದಿಲ್ಲ ಎಂದು ಹೂಂಕರಿಸುತ್ತಿರುತ್ತಾರೆ.

ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷದ ಸರಕಾರವಿರಲಿ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಅಧಿಕಾರದಲ್ಲಿರುವವರು ರಾಜಿ ಮಾಡಿಕೊಳ್ಳಬಾರದು. ಇದರಿಂದ ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆ ಉಂಟಾಗುತ್ತದೆ ಮಾತ್ರವಲ್ಲ, ವ್ಯವಸ್ಥೆಯ ಬಗೆಗಿನ ಜನಸಾಮಾನ್ಯರ ನಂಬಿಕೆ ಕುಸಿಯತೊಡಗುತ್ತದೆ. ಇಂತಹ ಪ್ರವೃತ್ತಿ ಮುಂದೆ ಅರಾಜಕತೆಗೆ ನಾಂದಿ ಹಾಡುತ್ತದೆ. ಅದೂ ಪೊಲೀಸ್ ಇಲಾಖೆಯ ಒಪ್ಪಿಗೆ ಇಲ್ಲದಿದ್ದರೂ ತಮ್ಮ ಪಕ್ಷದವರ ಮೇಲಿನ ಪ್ರಕರಣಗಳನ್ನು ಹಿಂದೆೆಗೆದುಕೊಳ್ಳುವುದು ಸರಿಯಲ್ಲ. ಜಗದೀಶ್ ಕಾರಂತರಂತಹವರ ಇತಿಹಾಸ ಪೊಲೀಸ್ ಇಲಾಖೆಗೆ ಗೊತ್ತಿದೆ. ಹಿಂದೆ ಸುರತ್ಕಲ್ ಮತ್ತು ಮಡಿಕೇರಿ ಕೋಮು ಗಲಭೆಗಳಲ್ಲಿ ಇವರ ಪಾತ್ರವಿರುವ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಖಚಿತ ಸಾಕ್ಷ್ಯಾಧಾರಗಳಿದ್ದರೂ ಇವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಿಂದೇಟು ಹಾಕಲು ಅಧಿಕಾರದಲ್ಲಿರುವವರ ಪ್ರಭಾವವೇ ಕಾರಣ ಎಂದರೆ ಅತಿಶಯೋಕ್ತಿ ಅಲ್ಲ.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೂಡ ರೈತ ಪರ, ಕಾರ್ಮಿಕ ಪರ ಹೋರಾಟಗಾರರ ಮೇಲಿನ ಕೆಲ ಪ್ರಕರಣಗಳನ್ನು ವಾಪಸ್ ಪಡೆದಿತ್ತು. ಈ ರೈತ, ಕಾರ್ಮಿಕ ನಾಯಕರೆಲ್ಲ ಯಾವುದೇ ಸಂದರ್ಭದಲ್ಲೂ ಹಿಂಸೆಗೆ ಪ್ರಚೋದಿಸಿದವರಲ್ಲ. ಅಂತಲೇ ಅವರ ಮೇಲಿನ ಖಟ್ಲೆಗಳನ್ನು ವಾಪಸ್ ಪಡೆದಾಗ ಪ್ರತಿಪಕ್ಷಗಳೂ ಆಕ್ಷೇಪಿಸಿರಲಿಲ್ಲ.

ಕರ್ನಾಟಕದ ಬಿಜೆಪಿ ಸರಕಾರ ಕೋಮು ಗಲಭೆ ಪ್ರಚೋದಕರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದವರ ಛಾಯಾಚಿತ್ರಗಳನ್ನು ಮತ್ತು ಅವರಿಗೆ ಸಂಬಂಧಪಟ್ಟ ಕೆಲ ವಿವರಗಳನ್ನು ಲಕ್ನೊ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಮುಂದಾಗಿರುವುದು ಇನ್ನೊಂದು ಅತಿರೇಕದ ಕ್ರಮವಾಗಿದೆ. ಈ ಪ್ರಕರಣ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿತು. ಈ ಪ್ರಕರಣವನ್ನು ಸ್ವಪ್ರೇರಣೆಯಿಂದ ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಪ್ರತಿಭಟನಾಕಾರರ ಛಾಯಾಚಿತ್ರ ಮತ್ತು ವಿವರಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸಬೇಕೆಂದು ಆದೇಶ ನೀಡಿದೆ.

ಹೀಗೆ ಬಿಜೆಪಿ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ತನ್ನ ಪಕ್ಷದ ಮತ್ತು ಸಂಘಪರಿವಾರದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪೊಲೀಸ್ ಇಲಾಖೆಯನ್ನು ಮನಬಂದಂತೆ ಬಳಸಿಕೊಳ್ಳುತ್ತ ಬಂದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಗಮನ ಹರಿಸಬೇಕು, ಗಲಭೆ ಪ್ರಚೋದಕರ ಮೇಲಿನ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುವುದರಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬುದನ್ನು ಮರೆಯಬಾರದು.

ಚುನಾವಣೆಯ ಮೂಲಕ ಗೆದ್ದು ಅಧಿಕಾರಕ್ಕೆ ಬಂದ ಬಿಜೆಪಿಯ ಬಹುತೇಕ ಶಾಸಕರು ಮತ್ತು ಸಂಸದರ ವರ್ತನೆ ಶಾಸನ ಸಭೆಯ ಹೊರಗಡೆ ಇರುವ ಗಲಭೆ ಪ್ರಚೋದಕರಿಗಿಂತ ಭಿನ್ನವಾಗಿರುವುದಿಲ್ಲ. ಸಂವಿಧಾನದ ಮೇಲೆ ನಿಷ್ಠೆ ಹೊಂದಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರು ಆಡುತ್ತಿರುವ ಮಾತುಗಳನ್ನು ಕೇಳಿದರೆ ಆತಂಕ ಉಂಟಾಗುತ್ತದೆ. ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವುದಾಗಿ ಹೇಳಿದ ಸಂಸದರು, ಗಾಂಧಿಯವರನ್ನು ಅವಮಾನಿಸಿದ ಚುನಾಯಿತ ಸದಸ್ಯರು ನಮ್ಮಲ್ಲಿದ್ದಾರೆ ಎಂಬುದು ನಾಚಿಕೆ ಪಡಬೇಕಾದ ಸಂಗತಿಯಾಗಿದೆ.

ಬಿಜೆಪಿಯಲ್ಲಿ ಅಧಿಕಾರ, ಸ್ಥಾನ ಮಾನಗಳನ್ನು ಗಟ್ಟಿಗೊಳಿಸಿಕೊಳ್ಳಬೇಕೆಂದರೆ ತೆರೆ ಮರೆಯಲ್ಲಿ ಒಮ್ಮಿಮ್ಮೆ ಬಹಿರಂಗವಾಗಿ ಬಿಜೆಪಿಯನ್ನು ನಿಯಂತ್ರಣ ಮಾಡುವ ಆರೆಸ್ಸೆಸ್‌ನ ವಿಶ್ವಾಸವನ್ನು ಗಳಿಸಬೇಕು. ಇದನ್ನು ಗಳಿಸಬೇಕೆಂದರೆ ಸಂಘದ ನಾಯಕರಿಗೆ ಇಷ್ಟವಾಗುವ ಭಾಷೆಯಲ್ಲಿ ಮಾತಾಡಬೇಕೆಂಬ ಭಾವನೆ ಬಿಜೆಪಿ ನಾಯಕರಲ್ಲಿ ಬಲವಾಗಿದೆ. ಇಂತಹವರು ಆಡುವ ಮಾತುಗಳು ಕಾನೂನು, ಶಿಸ್ತಿನ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಆದ್ದರಿಂದ ಪ್ರಚೋದಕ ಮಾತುಗಳಿಗೆ ಸರಕಾರ ಕಡಿವಾಣ ಹಾಕಬೇಕು ಹಾಗೂ ಯಾವುದೇ ಸಂದರ್ಭದಲ್ಲೂ ಖಟ್ಲೆಯನ್ನು ವಾಪಸ್ ಪಡೆಯಬಾರದು.

ಎಂತಹ ಪ್ರಚೋದನಕಾರಿ ಮಾತುಗಳನ್ನು ಆಡಿದರೂ ತಮ್ಮದೇ ಸರಕಾರ, ಏನನ್ನೂ ಮಾಡುವುದಿಲ್ಲ ಎಂದು ಗೊತ್ತಾದರೆ ಇಂತಹ ಹಿಂಸಾತ್ಮಕ ಮಾತುಗಳನ್ನು ಆಡುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಅದಕ್ಕೆ ಅವಕಾಶ ನೀಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News