15 ಮಂದಿ ಕೊರೋನ ಸೋಂಕಿತರ ಪೈಕಿ ಐವರು ಗುಣಮುಖ: ಆರೋಗ್ಯ ಸಚಿವ ಬಿ.ಶ್ರೀರಾಮುಲು

Update: 2020-03-20 11:28 GMT

ಬೆಂಗಳೂರು, ಮಾ.20: ರಾಜ್ಯ ವ್ಯಾಪ್ತಿಯಲ್ಲಿ 15 ಮಂದಿ ಕೊರೋನ ಸೋಂಕಿತರ ಪೈಕಿ ಐವರು ಗುಣಮುಖರಾಗಿದ್ದು, ಇಬ್ಬರನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬೆಂಗಳೂರಿನಲ್ಲಿ 11, ಕಲಬುರಗಿಯಲ್ಲಿ 3 ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನು, ಮಡಿಕೇರಿಯಲ್ಲಿ ಒಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಆದರೆ, ಸೋಂಕಿತರಲ್ಲಿ ಐವರು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದೆಲ್ಲೆಡೆ ಇದುವರೆಗೂ ಒಟ್ಟು 1,22,053 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ ಎಂದ ಅವರು, 1,143 ಜನರ ರಕ್ತ ಹಾಗೂ ಕಫ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 915 ಜನರ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಉಳಿದ ಪರೀಕ್ಷಾ ವರದಿಗಳು ಬರಬೇಕಾಗಿದೆ ಎಂದರು. ರಾಜ್ಯದಲ್ಲಿ ಸುಮಾರು 2,280 ಜನರನ್ನು ಮನೆಯಲ್ಲೆ ದಿಗ್ಬಂಧನದಲ್ಲಿಡಲಾಗಿದೆ. ಸುಮಾರು 97 ಜನರನ್ನು ಆಸ್ಪತ್ರೆಯಲ್ಲಿ ದಿಗ್ಬಂಧನದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನ ಸೋಂಕಿನಿಂದ ಯಾರೂ ಭಯಭೀತರಾಗಬೇಕಿಲ್ಲ. ಅಲ್ಲದೆ, ಗುರುವಾರ ಒಂದೇ ದಿನದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಜನರು ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದು ಶ್ರೀರಾಮುಲು ವಿವರಿಸಿದರು.

ಬೆಂಬಲ: ಪ್ರಧಾನಿ ನರೇಂದ್ರ ಮೋದಿ, ಮಾ.22 ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಹೀಗಾಗಿ, ನಾವೆಲ್ಲರೂ ಪ್ರಧಾನಿ ಕರೆಗೆ ಕೈಜೋಡಿಸಿ ಸ್ಪಂದಿಸೋಣ ಎಂದು ಅವರು ಮನವಿ ಮಾಡಿದರು.

‘ಜನಗಣತಿ ತುರ್ತು ಮುಂದೂಡಿ’

ಕೊರೋನ ವೈರಸ್ ಭೀತಿಯಿಂದ ಎ.14 ರಿಂದ ರಜೆಯ ಅವಧಿಯಲ್ಲಿ ನಡೆಯುವ ಜನಗಣತಿ ಕಾರ್ಯವನ್ನು ಮುಂದೂಡಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.

ಜನಗಣತಿ ವೇಳೆ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಬೇಕಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೊರೋನ ಸೋಂಕು ಹರಡುವ ಭೀತಿ ಇರುವುದರಿಂದ ಜನಗಣತಿ ಮಾಡುವುದರಿಂದ ಸಾಕಷ್ಟು ತೊಂದರೆಗಳಾಗುತ್ತವೆ. ಆದ್ದರಿಂದ ಜನಗಣತಿ ಮಾಡಲು ಇದು ಸೂಕ್ತ ಸಮಯವಲ್ಲ. ಆದ್ದರಿಂದ ಶಿಕ್ಷಕರ ಹಿತದೃಷ್ಟಿಯಿಂದ ಜನಗಣತಿ ಕಾರ್ಯವನ್ನು ತುರ್ತು ಮುಂದೂಡುವಂತೆ ಸಂಘದ ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಸಗಟು ಬಟ್ಟೆ ವ್ಯಾಪಾರ ಬಂದ್

ಬೆಂಗಳೂರು ಹೋಲ್ ಸೇಲ್ ಕ್ಲಾತ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಮಾ.22 ರಿಂದ ಮೂರು ದಿನಗಳ ಕಾಲ ಎಲ್ಲ ಸಗಟು ಬಟ್ಟೆ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಹೀಗಾಗಿ ಬಟ್ಟೆ ವ್ಯಾಪಾರಕ್ಕೆ ಹೆಸರಾದ ಚಿಕ್ಕಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಳಿಗೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ. ಸಾರ್ವಜನಿಕರು ಸಹಕರಿಸಬೇಕೆಂದು ಸಂಘದ ಕಾರ್ಯದರ್ಶಿ ಯೋಗೇಶ್ ವಿ. ಸೇಠ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News