ಪ್ರಯೋಗಾಲಯದ ಕೊರತೆ ನಿವಾರಿಸಿ: ವೀಡಿಯೊ ಸಂವಾದದಲ್ಲಿ ಪ್ರಧಾನಿಗೆ ಠಾಕ್ರೆ ಒತ್ತಾಯ

Update: 2020-03-20 17:32 GMT

ಹೊಸದಿಲ್ಲಿ, ಮಾ.20: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ಮೋದಿ ಶುಕ್ರವಾರ ಸಂಜೆ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವೀಡಿಯೊ ಸಂವಾದದಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕೊರೊನಾ ವೈರಸ್ ಪರೀಕ್ಷಿಸುವ ಪ್ರಯೋಗಾಲಯದ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ದೇಶದಲ್ಲಿ ಈಗ ಕೊರೊನಾ ವೈರಸ್ ಪಿಡುಗು ಎರಡನೇ ಹಂತದಲ್ಲಿದೆ. ಇದು ಮೂರನೇ ಹಂತ ಪ್ರವೇಶಿಸಿದರೆ ಇನ್ನಷ್ಟು ವಿನಾಶಕಾರಿಯಾಗುತ್ತದೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ಅಗತ್ಯದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಠಾಕ್ರೆ ಸಲಹೆ ನೀಡಿದರು. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 52ಕ್ಕೇರಿದೆ. ವೈರಸ್ ಹರಡದಂತೆ ಸರಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಠಾಕ್ರೆ ಮಾಹಿತಿ ನೀಡಿದರು.

ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಹಾಗೂ ಆರೋಗ್ಯ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಸಂಜೆ 4 ಗಂಟೆಯಿಂದ ಆರಂಭವಾದ ಸಂವಾದದಲ್ಲಿ ಭಾಗವಹಿಸಿದ್ದರು. ಕೊರೊನಾ ವೈರಸ್ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸುವ ಜೊತೆಗೆ, ಕೊರೊನಾ ವೈರಸ್ ಸವಾಲು ಎದುರಿಸಲು ರಾಜ್ಯಗಳ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ಒದಗಿಸುವ ವಿಷಯಕ್ಕೆ ಸಂವಾದದಲ್ಲಿ ಮಹತ್ವ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವೈರಸ್ ಹಬ್ಬದಂತೆ ನಡೆಯುವ ಪ್ರಯತ್ನದಲ್ಲಿ ಜನತೆ ಹಾಗೂ ಸ್ಥಳೀಯ ಅಧಿಕಾರಿಗಳನ್ನು ತೊಡಗಿಸಿಕೊಳ್ಳುವುದಕ್ಕೆ ಗಮನ ನೀಡುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಪಾರಾಗಿದೆ ಎಂಬ ಭಾವನೆ ಹಲವರಲ್ಲಿದೆ. ಆದರೆ ವಿಶ್ವದಾದ್ಯಂತದ ಪ್ರಕರಣಗಳನ್ನು ಗಮನಿಸಿದರೆ, ಆರಂಭಿಕ ಹಂತದಲ್ಲಿ ಕೊರೊನ ವೈರಸ್ ಹರಡುವಿಕೆ ಅತ್ಯಂತ ನಿಧಾನಗತಿಯಲ್ಲಿದ್ದರೆ ಕ್ರಮೇಣ ವೇಗ ಪಡೆಯುತ್ತದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕನೂ ಮುಂಜಾಗರೂಕತೆ ವಹಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಹಲವು ರಾಜ್ಯದ ಮುಖ್ಯಮಂತ್ರಿಗಳು ಕೊರೊನಾ ವೈರಸ್ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಸಂವಾದದಲ್ಲಿ ವಿವರಿಸಿದರು. ಭಾರತದಲ್ಲಿ ಈಗ ಕೊರೊನ ವೈರಸ್ ಎರಡನೇ ಹಂತದಲ್ಲಿದೆ. ಅಂದರೆ ಸ್ಥಳೀಯ ಪ್ರಸರಣ ಹಂತ. ಈ ಹಂತದಲ್ಲಿ ವೈರಸ್ ಹರಡುವುದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಆದರೆ ಮೂರನೇ ಹಂತವಾದ ಸಮುದಾಯ ಪ್ರಸರಣವು ಅತ್ಯಂತ ಮಾರಕವಾಗಿದ್ದು ಈ ಹಂತದಲ್ಲಿ ವ್ಯಕ್ತಿಗೆ ಯಾರಿಂದ ಸೋಂಕು ತಗುಲಿದೆ ಎಂದು ಪತ್ತೆಹಚ್ಚಲು ಕಷ್ಟವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News