ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ ನಿರ್ಲಕ್ಷ್ಯ : ತೈವಾನ್ ಆರೋಪ

Update: 2020-03-21 04:19 GMT

ಹೊಸದಿಲ್ಲಿ: ಚೀನಾದಲ್ಲಿ ಜನರಿಂದ ಜನರಿಗೆ ಹೊಸ ವೈರಸ್ ಸೋಂಕು ಹರಡುತ್ತಿದೆ ಎಂದು ಡಿಸೆಂಬರ್‌ನಲ್ಲಿ ನೀಡಿದ್ದ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನಿರ್ಲಕ್ಷಿಸಿತ್ತು ಎಂದು ತೈವಾನ್ ಗಂಭೀರ ಆರೋಪ ಮಾಡಿದೆ.

ಈ ಸೋಂಕು ತೀರಾ ವ್ಯಾಪಕ ಅಂಟುರೋಗ ಎಂದು ಡಬ್ಲ್ಯುಎಚ್‌ಒಗೆ ಎಚ್ಚರಿಕೆ ನೀಡಲಾಗಿತ್ತು. ಹೀಗೆ ನಿರ್ಲಕ್ಷಿಸಿದ ಕ್ರಮ, ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ತಡೆ ಕಾರ್ಯಾಚರಣೆ ನಿಧಾನವಾಗಲು ಕಾರಣವಾಯಿತು ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.

ಆರಂಭಿಕ ಕೊರೋನಾ ಪ್ರಕರಣಗಳನ್ನು ಚೀನಾ ಮುಚ್ಚಿ ಹಾಕಿತ್ತು ಎಂಬ ಆರೋಪದ ನಡುವೆಯೇ, ಸಾಂಕ್ರಾಮಿಕ ತಡೆಗೆ ಅಲ್ಲಿನ ಸರ್ಕಾರ ಕೈಗೊಂಡ ಕ್ರಮವನ್ನು ಡಬ್ಲ್ಯುಎಚ್‌ಒ ಶ್ಲಾಘಿಸಿತ್ತು ಎಂದು ಆಪಾದಿಸಲಾಗಿದೆ. 2.50 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಹರಡಿದ್ದು, 10 ಸಾವಿರಕ್ಕೂ ಹೆಚ್ಚು ಮಂದಿ ಬಲಿ ಪಡೆದ ಈ ಮಾರಕ ಸಾಂಕ್ರಾಮಿಕದ ಬಗ್ಗೆ ಮಾಹಿತಿಯನ್ನು ಪಸರಿಸಿದರೆ, ಅಂಥವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ತೈವಾನ್ ಉಪಾಧ್ಯಕ್ಷ ಚೆನ್ ಚೀನ್ ಜೆನ್ ಹೇಳಿದ ಪ್ರಕಾರ, ವೈದ್ಯಕೀಯ ಸಿಬ್ಬಂದಿ ಅಸ್ವಸ್ಥರಾಗುತ್ತಿದ್ದಾರೆ ಎನ್ನುವ ವಿಷಯ ವೈದ್ಯರಿಂದ ತಿಳಿದು ಬಂದಿತ್ತು. ಇದು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತಿದೆ ಎನ್ನುವುದರ ಸಂಕೇತ. ಚೀನಾ ಹಾಗೂ ತೈಪೆ ಅಧಿಕಾರಿಗಳು ಡಿಸೆಂಬರ್ 31ರಂದೇ ಈ ಬಗ್ಗೆ ಎಚ್ಚರಿಕೆ ಸಂದೇಶವನ್ನು ಚೀನಾ ಹಾಗೂ ಡಬ್ಲ್ಯುಎಚ್‌ಓ ಅಧಿಕಾರಿಗಳಿಗೆ ತಲುಪಿಸಿದ್ದರು ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆ, ವಿಶ್ವದ 196 ದೇಶಗಳ ನಡುವೆ ಸಾಂಕ್ರಾಮಿಕ ತಡೆ ಮತ್ತು ಸ್ಪಂದನೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಚೌಕಟ್ಟಾಗಿದೆ. ಈ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿತ್ತು. ಕೋವಿಡ್-19 ಮನುಷ್ಯನಿಂದ ಮನುಷ್ಯನಿಗೆ ಹರಡುತ್ತಿದೆ ಎನ್ನುವುದನ್ನು ಚೀನಾದ ಆರೋಗ್ಯ ಸಚಿವಾಲಯ ಜ.20ರಂದು ದೃಢಪಡಿಸಿತ್ತು.

ಇಂಥ ಮಾಹಿತಿಗಳ ವಿನಿಮಯಕ್ಕಾಗಿಯೇ ಇರುವ ಐಎಚ್‌ಆರ್ ಆಂತರಿಕ ವೆಬ್‌ಸೈಟ್‌ನಲ್ಲಿ ಈ ಯಾವ ಮಾಹಿತಿಗಳನ್ನೂ ಹಂಚಿಕೊಂಡಿರಲಿಲ್ಲ ಎಂದು ಚೆನ್ ಚೀನ್ ಜೆನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೈವಾನ್ ತನ್ನ ಒಂದು ಪ್ರದೇಶ. ಅದನ್ನು ಪ್ರತ್ಯೇಕ ದೇಶ ಎಂದು ಪರಿಗಣಿಸುವಂತಿಲ್ಲ ಎನ್ನುವುದು ಚೀನಾ ವಾದ. ಆದ್ದರಿಂದ ತೈವಾನ್ ಇನ್ನೂ ಡಬ್ಲ್ಯುಎಚ್‌ಒ ಭಾಗವಾಗಿಲ್ಲ.

ಜ. 14ರಂದು ಡಬ್ಲ್ಯುಎಚ್‌ಒ ಕೋವಿಡ್ 19 ಸಾಂಕ್ರಾಮಿಕವನ್ನು ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಎಂದು ಘೋಷಿಸಿತ್ತು. ಆದರೆ ಇದು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎನ್ನುವುದನ್ನು ದೃಢಪಡಿಸುವ ಯಾವ ಪುರಾವೆಯೂ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News