ಎಪ್ರಿಲ್ 15ರವರೆಗಿನ ಟಿಕೆಟ್ ರದ್ದುಗೊಳಿಸುವ ಪ್ರಯಾಣಿಕರಿಗೆ ಶೇ.100 ರೀಫಂಡ್: ಭಾರತೀಯ ರೈಲ್ವೆ

Update: 2020-03-21 10:31 GMT

ಹೊಸದಿಲ್ಲಿ: ಕೊರೋನಾವೈರಸ್ ಹರಡುವ ಭೀತಿಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರು ಸೇರುವುದನ್ನು ತಪ್ಪಿಸಲು ಹಾಗೂ ಸಾಮಾಜಿಕ ಅಂತರ ಕಾಪಾಡಲು ಸಹಕಾರಿಯಾಗಲು ಎಪ್ರಿಲ್ 15ರವರೆಗಿನ ತಮ್ಮ ಪ್ರಯಾಣ ಟಿಕೆಟನ್ನು ರದ್ದುಗೊಳಿಸುವ ಪ್ರಯಾಣಿಕರಿಗೆ ಸಂಪೂರ್ಣ ರೀಫಂಡ್ ನೀಡುವುದಾಗಿ ಭಾರತೀಯ ರೈಲ್ವೆ ಹೇಳಿದೆ.

ಮಾರ್ಚ್ 21 ಹಾಗೂ ಎಪ್ರಿಲ್ 15ರ ನಡುವೆ ರೈಲುಗಳಲ್ಲಿ ಪ್ರಯಾಣಿಸಲಿದ್ದ ಪ್ರಯಾಣಿಕರಿಗೆ ಶೇ. 100ರಷ್ಟು ರೀಫಂಡ್ ಹಾಗೂ ಈ ಸಂದರ್ಭ ಕಾರ್ಯಾಚರಿಸುವ ರೈಲುಗಳಲ್ಲಿನ ತಮ್ಮ ಪ್ರಯಾಣದ ಟಿಕೆಟನ್ನು ರದ್ದುಗೊಳಿಸುವವರಿಗೂ ಸಂಪೂರ್ಣ ರೀಫಂಡ್ ದೊರೆಯಲಿದೆ ಎಂದು ರೈಲ್ವೆ ತಿಳಿಸಿದೆ.

"ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಂ ಅನ್ವಯ ಕೌಂಟರಿನಿಂದ ನೀಡಲಾದ ಟಿಕೆಟುಗಳಿಗೆ ಸಂಬಂಧಿಸಿದ ರೀಫಂಡ್ ನಿಯಮಗಳನ್ನು ಭಾರತೀಯ ರೈಲ್ವೆ ಸಡಿಲಿಸಿದೆ. ಇ-ಟಿಕೆಟಿಗೆ ಸಂಬಂಧಿಸಿದ ಎಲ್ಲಾ ನಿಯಮಗಳು ಹಿಂದಿನ ನಿಯಮಗಳೇ ಆಗಿದ್ದು ರೀಫಂಡ್ ಪಡೆಯಲು ಪ್ರಯಾಣಿಕರು ನಿಲ್ದಾಣಕ್ಕೆ ಬರುವ ಅಗತ್ಯವಿಲ್ಲ" ಎಂದು ರೈಲ್ವೆ ತಿಳಿಸಿದೆ.

ಶನಿವಾರ ಮಧ್ಯರಾತ್ರಿಯಿಂದ ರವಿವಾರ ರಾತ್ರಿ 10 ಗಂಟೆಯ ತನಕ ದೇಶದ ಯಾವುದೇ ನಿಲ್ದಾಣದಿಂದ ಯಾವುದೇ ಪ್ಯಾಸೆಂಜರ್ ರೈಲು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಕಾರ್ಯಾಚರಿಸುವುದಿಲ್ಲ ಎಂದು ರೈಲ್ವೆ ಈಗಾಗಲೇ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News