ಕೊರೋನ ವೈರಸ್: ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

Update: 2020-03-24 14:07 GMT

ಬೆಂಗಳೂರು, ಮಾ.24: ಕೋವಿಡ್-19 ಎಂಬ ವೈರಾಣು ಪೆಡಂಭೂತವಾಗಿ ರಾಜ್ಯದ ಜನತೆ ಅಷ್ಟೇ ಅಲ್ಲದೇ ಇಡೀ ವಿಶ್ವವನ್ನೆ ಕಾಡುತ್ತಿದೆ. ಒಂದು ತಿಂಗಳ ಹಿಂದೆ ಕೋವಿಡ್-19ರ ವರದಿ ಬಂದಾಗ ನಾವು ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ, ಹಾಗಂತ ನಾನೇನು ಸಮ್ಮನೆ ಕೂಡಲಿಲ್ಲ. ಕೋವಿಡ್-19 ನಿಯಂತ್ರಣಕ್ಕಾಗಿ ಸರಕಾರ 200 ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ವಿಧಾನಸಭೆಯಲ್ಲಿ 2020-21ನೆ ಸಾಲಿನ ಆಯವ್ಯಯದ ಮೇಲೆ ನಡೆದ ಚರ್ಚೆಗೆ ಮಂಗಳವಾರ ಉತ್ತರ ನೀಡಿದ ಅವರು, ದೇಶದಲ್ಲಿ ಕೋವಿಡ್-19 ಮೊದಲ ಸಾವು ಕರ್ನಾಟಕದಲ್ಲಿ ಆದರೂ, ನಾವು ಒಂದು ಹಂತಕ್ಕೆ ವೈರಾಣು ಹರಡುವುದನ್ನು ತಡೆದಿದ್ದೇವೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ರಾಜ್ಯದ ಕ್ರಮಗಳನ್ನು ಮೆಚ್ಚಿದ್ದಾರೆ ಎಂದರು.

ಈಗ ನಮಗೆ ಪರೀಕ್ಷಾ ಸಮಯ. ನಾವು ಕೋವಿಡ್-19ರ ನಿಯಂತ್ರಣದಲ್ಲಿ ಎರಡನೆ ಹಂತದಲ್ಲಿ ಇದ್ದೇವೆ. ಮೂರು ಮತ್ತು ನಾಲ್ಕರ ಹಂತಕ್ಕೆ ಈ ರೋಗ ತಲುಪಬಾರದು. ಮೂರನೆ ಹಂತಕ್ಕೆ ತಲುಪದಂತೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನನ್ನ ಮನಃಸಾಕ್ಷಿಯಾಗಿ ಹೇಳುತ್ತಿದ್ದೇನೆ. ದೇವರ ದಯೆಯಿಂದ ರಾಜ್ಯದ ಜನತೆಗೆ ವೈರಾಣು ಹೈರಾಣು ಮಾಡದಂತೆ ತಡೆದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಕೋವಿಡ್-19 ಸೋಂಕಿಗೆ ಒಳಗಾದ ಬಡವರಿಗೆ ಹಲವಾರು ಸಹಾಯಗಳನ್ನು ನಮ್ಮ ಸರಕಾರ ಮಾಡುತ್ತಿದೆ. ಬಡವರಿಗೆ ಎರಡು ತಿಂಗಳ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗುವುದು. ನರೇಗಾ ಅಡಿಯಲ್ಲಿ ಯೋಜನೆಗಳ ಹೆಚ್ಚುವರಿ ಮಾನವ ದಿನಗಳ ಬಾಬತ್ತು ಮುಂಗಡ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 1 ಸಾವಿರ ರೂ.ಗಳನ್ನು ಕೊಡಲಾಗುವುದು. ಸರಕಾರ 'ಬಡವರ ಬಂಧು' ಸಾಲದ ಯೋಜನೆಯಡಿಯಲ್ಲಿ 2018-19ನೆ ಸಾಲಿಗೆ 9.10 ಕೋಟಿ ರೂ.(15,120 ಜನರಿಗೆ) ಮತ್ತು 2019-2020ನೆ ಸಾಲಿಗೆ 5.16 ಕೋಟಿ ರೂ.(6,500 ಜನರಿಗೆ) ಒಟ್ಟು 13.20 ಕೋಟಿ ರೂ.ಸಾಲಮನ್ನಾ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಇಂತಹ ಸಂಕಷ್ಟದ ಸಮಯದಲ್ಲಿ ವಿರೋಧ ಪಕ್ಷದವರು ಆಯವ್ಯಯದ ಅನುಮೋದನೆಗೆ ಸಹಕರಿಸಿ, ಜನತೆಗೆ ಒಂದು ಒಳ್ಳೆಯ ಸಂದೇಶ ಕಳುಹಿಸುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ರಾಜಕಾರಣಿಗಳು ರಾಜ್ಯವನ್ನು ಕಾಪಾಡಲು ಒಂದೇ ಮನಸ್ಥಿತಿಯಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮುಂಗಡವಾಗಿ ಎರಡು ತಿಂಗಳ ಪಿಂಚಣಿ ಬಿಡುಗಡೆ

ನರೇಗಾ ಅಡಿಯಲ್ಲಿ ಹೆಚ್ಚುವರಿ ಮಾನವ ದಿನಗಳ ಮುಂಗಡ ಹಣ ಬಿಡುಗಡೆ

21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 1 ಸಾವಿರ ರೂ.

‘ಬಡವರ ಬಂಧು’ ಸಾಲದ ಯೋಜನೆಯಡಿಯಲ್ಲಿ 2018-19 ಹಾಗೂ 2019-2020ನೆ ಸಾಲಿನ ಸಾಲ ಮನ್ನಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News