ಕೊರೋನ ಭೀತಿಯ ನಡುವೆಯೂ ಲಾಕ್‍ ಡೌನ್ ಉಲ್ಲಂಘನೆ: ಪೊಲೀಸರಿಂದ ಲಘು ಲಾಠಿ ಪ್ರಹಾರ

Update: 2020-03-24 13:33 GMT

ಬೆಂಗಳೂರು, ಮಾ. 24: ಕೊರೋನ ವೈರಸ್ ನಿಯಂತ್ರಣ ಸಂಬಂಧ ರಾಜ್ಯ ಸರಕಾರ ವಿಧಿಸಿರುವ ನಿರ್ಬಂಧಕ್ಕೆ (ಲಾಕ್‍ ಡೌನ್) ಕಿವಿಗೂಡದೆ, ಅನಗತ್ಯವಾಗಿ ರಸ್ತೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುತ್ತಿದ್ದ ಹಲವರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಮಂಗಳವಾರ ರಾಜಧಾನಿ ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಬೆಳಗಾವಿ ಸೇರಿದಂತೆ ಅನೇಕ ಕಡೆಗಳಲ್ಲಿ, ಮಾರುಕಟ್ಟೆ ಮತ್ತು ದಿನಸಿ ಸಾಮಗ್ರಿಗಳು ದೊರೆಯುವ ಸ್ಥಳಗಳಲ್ಲಿ ಗುಂಪು ಗುಂಪಾಗಿ ಓಡಾಡುತ್ತಿದ್ದ ಹಲವರ ಮೇಲೆ ಲಾಠಿ ಬೀಸಿ, ಮನೆಗೆ ಕಳುಹಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಬೆಂಗಳೂರಿನ ಕೆಂಗೇರಿಯಲ್ಲಿ ಮಂಗಳವಾರವೂ ಸಂತೆಯ ವಾತಾವರಣ ನಿರ್ಮಾಣವಾಗಿತ್ತು. ಬಹುತೇಕ ಅಂಗಡಿಗಳು, ಹೂವು, ತರಕಾರಿ ಮಳಿಗೆಗಳು ತೆರೆಯಲಾಗಿತ್ತು. ಅದೇ ರೀತಿ ಕೆ.ಆರ್.ಮಾರುಕಟ್ಟೆ, ವಿಜಯನಗರ ಟೋಲ್‍ಗೇಟ್, ಯಶವಂತಪುರ ಮುಂತಾದೆಡೆ ಜನರ ಓಡಾಟವಿತ್ತು. ಇದನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸುತ್ತಿದ್ದರು. ಮನೆಯಲ್ಲಿರುವಂತೆ ಸೂಚಿಸಿ ಕಳುಹಿಸಿದರೂ ಅವರ ಸಲಹೆಯನ್ನು ಲೆಕ್ಕಿಸದೆ ಕೆಲ ಯುವಕರು ಬೈಕ್‍ನಲ್ಲಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಬೆತ್ತದ ರುಚಿ ತೋರಿಸಬೇಕಾಯಿತು.

ಪೊಲೀಸರ ಮನವಿ: ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಸಹ ಕೆಲವು ಕಡೆ ಜನರು ಓಡಾಡುತ್ತಿರುವುದು ಕಂಡುಬಂದಿದೆ. ಬಹುತೇಕ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್‍ಗಳನ್ನು ಹಾಕಿ ವಾಹನಗಳಲ್ಲಿ ಸಂಚರಿಸುವವರು ಹಾಗೂ ರಸ್ತೆಯಲ್ಲಿ ನಡೆದು ಹೋಗುವವರನ್ನು ತಡೆದು ಮನೆಯಲ್ಲಿರಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಕೆಲವು ವಾಹನ ಸವಾರರನ್ನು ತಡೆದ ಪೊಲೀಸರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ವಿಚಾರಿಸಿ ವಿನಾಕಾರಣ ಓಡಾಡಬೇಡಿ, ಮನೆಯಲ್ಲಿರಿ ಎಂದು ಅವರ ಮನವೊಲಿಸುತ್ತಿದ್ದುದು ಕಂಡುಬಂತು. 

ಬೆಂಗಳೂರು ನಗರ ಪೊಲೀಸ್ ಆಯುಕ್ತರು ನಗರದಾದ್ಯಂತ ನಿನ್ನೆ ಮಧ್ಯರಾತ್ರಿ 12 ಗಂಟೆಯಿಂದ ಮಾ.31ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ (144 ಸೆಕ್ಷನ್) ಜಾರಿಗೊಳಿಸಿದ್ದಾರೆ. ಕೊರೋನ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಜನತೆ ಇದಕ್ಕೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದರೂ ವಿನಾಕಾರಣ ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂದಿದ್ದು, ಪೊಲೀಸರು ಈ ನಿಟ್ಟಿನಲ್ಲಿ ಅವರನ್ನು ವಾಪಸ್ ಕಳುಹಿಸುವಲ್ಲಿ ನಿರತರಾಗಿದ್ದಾರೆ.

ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಿನ್ನೆಯಿಂದಲೇ ಧ್ವನಿವರ್ಧಕಗಳ ಮೂಲಕ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ನಿಷೇಧಾಜ್ಞೆ ಜಾರಿ ಇದೆ, ಹೊರಗೆ ಹೋಗಬೇಡಿ ಎಂದು ಜನತೆಗೆ ಅರಿವು ಮೂಡಿಸಿದರು.

ಒಟ್ಟಾರೆ ಕೊರೋನ ವೈರಸ್ ತೀವ್ರತೆ ಜನರಿಗೆ ತಟ್ಟಿದಂತಿಲ್ಲ. ರಾಜ್ಯದಲ್ಲಿ ಈಗಾಗಲೇ ಹತ್ತಾರು ಜನರಿಗೆ ಸೋಂಕು ತಟ್ಟಿದ್ದು, ರೋಗದ ತೀವ್ರತೆ ಉಲ್ಬಣಗೊಳ್ಳುತ್ತಿದೆ. ರೋಗವನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನವನ್ನು ಸರಕಾರ ಮಾಡುತ್ತಿದ್ದು, ಜನ ಸ್ವಯಂಜಾಗೃತಿ ಕೈಗೊಳ್ಳುವ ಅಗತ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News