ಸೋಂಕು ಬಾಧಿತರ ಕುಟುಂಬ ಸದಸ್ಯರಿಗೂ ಕೊರೋನ ಹರಡುತ್ತಿದೆ: ಕಿಶನ್ ರೆಡ್ಡಿ ಕಳವಳ

Update: 2020-03-24 15:45 GMT

ಹೊಸದಿಲ್ಲಿ, ಮಾ.24: ವಿದೇಶದಿಂದ ಹಿಂತಿರುಗಿರುವ ಕೊರೋನ ವೈರಸ್ ಬಾಧಿತರಾದವರ ಕುಟುಂಬ ಸದಸ್ಯರಿಗೂ ಈಗ ಸೋಂಕು ಹರಡತೊಡಗಿದ್ದು, ಈ ಮಾರಣಾಂತಿಕ ರೋಗ ಹರಡುವುದನ್ನು ತಡೆಯುವುದಕ್ಕಾಗಿ ಸರಕಾರವು ಜಾರಿ ಗೊಳಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಸಹಾಯಕ ಗೃಹ ಸಚಿವ ಜಿ. ಕಿಶನ್ ರೆಡ್ಡಿ ಜನತೆಗೆ ಮನವಿ ಮಾಡಿದ್ದಾರೆ.

ಅಮೆರಿಕದಂತಹ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೂ ಈ ಕೊರೋನ ವೈರಸ್‌ನ ಹರಡುವಿಕೆಯನ್ನು ತಡೆಯಲು ಸಾಧ್ಯವಾಗಿಲ್ಲ, ಹೀಗಿರುವಾಗ ದೇಶದ ಜನತೆ ಈ ಭಯಾನಕ ರೋಗವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದ ಅವರು ವಿವಿಧ ವಿಮಾನನಿಲ್ದಾಣಗಳಲ್ಲಿ ಸುಮಾರು 15.24 ಲಕ್ಷ ಮಂದಿಯನ್ನು ಕೊರೋನ ಸ್ಕ್ರೀನಿಂಗ್‌ಗೊಳಪಡಿಸಲಾಗಿದೆ. ಸುಮಾರು 69,436 ಮಂದಿಯನ್ನು ಮನೆಯಲ್ಲಿಯೇ ಕ್ವಾರಂಟೈನ್ (ದಿಗ್ಬಂಧನ)ನಲ್ಲಿರುವಂತೆ ಸಲಹೆ ನೀಡಲಾಗಿದ್ದು, ಅವರ ಮೇಲೆ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಅಧಿಕಾರಿಗಳು ನಿಗಾವಹಿಸಿದ್ದಾರೆ ಎಂದು ತಿಳಿಸಿದರು.

‘‘ಈವರೆಗೆ, ವಿದೇಶದಿಂದ ವಾಪಸಾಗಿರುವವರು ಸೋಂಕಿಗೊಳಗಾಗುತ್ತಿದ್ದರು. ಈಗ ಅದು ಅವರ ಕುಟುಂಬ ಸದಸ್ಯರಿಗೂ ಹರಡುತ್ತಿದೆ. ಹೀಗಾಗಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ರೋಗವನ್ನು ಜನತೆ ಹಗುರವಾಗಿ ಪರಿಗಣಿಸಬಾರದು ಹಾಗೂ ಸಾಮಾಜಿಕ ಅಂತರ ಪಾಲಿಸುವುದನ್ನು ಖಾತರಿಪಡಿಸುವುದ್ಕಾಗಿ ವಿಧಿಸಲಾಗಿರುವ ನಿರ್ಬಂಧಗಳನ್ನು ಉಲ್ಲಂಘಿಸಬಾದು’’ ಎಂದು ಅವರು ಜನತೆಗೆ ಮನವಿ ಮಾಡಿದರು.

 ‘‘ಅಮೆರಿಕದಲ್ಲಿಯೂ ಕೊರೋನಾ ವೈರಸ್ ಪ್ರಕರಣಗಸಂಖ್ಯೆ ಒಂದೇ ತಿಂಗಳಲ್ಲಿ 4 ಸಾವಿರದಿಂದ 41 ಸಾವಿರಕ್ಕೆ ಜಿಗಿದಿತ್ತು. ಅಭಿವೃದ್ಧಿ ಹೊಂದಿದ ದೇಶಗಳು ಕಡಿಮೆ ಜನಸಂಖ್ಯೆ, ಉತ್ತಮ ಆರೋಗ್ಯ ಸೌಕರ್ಯಗಳು ಹಾಗೂ ಉತ್ತಮ ಸಂಪನ್ಮೂಲಗಳು ಹಾಗೂ ತಂತ್ರಜ್ಞಾನವನ್ನು ಹೊಂದಿವೆಯಾದರೂ, ಅವುಗಳಿಗೂ ಈ ರೋಗ ಹರಡುವುದನ್ನು ತಡೆಯಲು ಸಾಧ್ಯವಾಗಿಲ್ಲ’’ ಎಂದು ಅವರು ಹೇಳಿದರು.

‘‘ಭಾರತವು ಜಗತ್ತಿನಲ್ಲಿಯೇ ಅತ್ಯಧಿಕ ಜನಸಂಖ್ಯೆಯಿರುವ ರಾಷ್ಟ್ರವಾಗಿದ್ದು ಇಲ್ಲಿ ಜನರು ಈಗಲೂ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ನಾವು ಅತ್ಯಧಿಕ ಮುನ್ನೆಚ್ಚರಿಕೆಯನ್ನು ವಹಿಸಬೇಕಾದ ಅಗತ್ಯವಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News