ವಿಧಾನಸಭೆ ಕಲಾಪ: 21 ದಿನಗಳಲ್ಲಿ 106 ಗಂಟೆ ಚರ್ಚೆ

Update: 2020-03-24 16:36 GMT

ಬೆಂಗಳೂರು, ಮಾ.24: ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ಫೆ.17ರಂದು ರಾಜ್ಯಪಾಲರು ಮಾಡಿದ ಭಾಷಣದಿಂದ ಆರಂಭವಾದ 15ನೆ ವಿಧಾನಸಭೆಯ ಆರನೆ ಅಧಿವೇಶನವು ಮಾ.24ರವರೆಗೆ ಒಟ್ಟು 21 ದಿನಗಳ ಕಾಲ ಕಲಾಪ ನಡೆದಿದ್ದು, 106 ಗಂಟೆಗಳ ಚರ್ಚೆ ವಿಧಾನಸಭೆಯಲ್ಲಿ ನಡೆದಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಮಂಗಳವಾರ ವಿಧಾನಸಭೆಯ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮುನ್ನ ಈ ಅಧಿವೇಶನದ ಸಂಕ್ತಿಪ್ತ ವಿವರವನ್ನು ಸದನಕ್ಕೆ ತಿಳಿಸಿದ ಅವರು, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ 25 ಸದಸ್ಯರು 11 ಗಂಟೆ 35 ನಿಮಿಷ ಚರ್ಚಿಸಿದ್ದು, ವಂದನಾ ನಿರ್ಣಯದ ಪ್ರಸ್ತಾಪವನ್ನು ಮಾ.2ರಂದು ಅಂಗೀಕರಿಸಲಾಗಿದೆ ಎಂದರು.

ಇತ್ತೀಚೆಗೆ ನಿಧನರಾದ ರಾಜ್ಯದ ಮಾಜಿ ರಾಜ್ಯಪಾಲರಾದ ಟಿ.ಎನ್.ಚತುರ್ವೇದಿ, ಹಂಸರಾಜ್ ಭಾರದ್ವಾಜ್, ಮಾಜಿ ಸಚಿವರಾದ ಡಿ.ಮಂಜುನಾಥ್, ವೈಜನಾಥ್‍ ಪಾಟೀಲ್, ಮಲ್ಲಾರಿ ಗೌಡ ಪಾಟೀಲ್, ಕೆ.ಅಮರನಾಥ್ ಶೆಟ್ಟಿ, ಸಿ.ಚನ್ನಿಗಪ್ಪ, ಮಾಜಿ ಶಾಸಕರಾದ ನಾರಾಯಣರಾವ್ ಗೋವಿಂದರಾವ್ ತರಳೆ, ಚಂದ್ರಕಾಂತ್ ಸಿಂಧೋಲ್, ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮಿ, ನಿವೃತ್ತ ಲೋಕಾಯುಕ್ತ ನ್ಯಾ.ಎನ್.ವೆಂಕಟಾಚಲ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಹಿರಿಯ ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿ ರಾವ್, ಯಕ್ಷಗಾನ ಕಲಾವಿದ ಹೊಸತೋಟ್ ಮಂಜುನಾಥ್ ಭಾಗವತ್, ಭಾರತೀಯ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಟಿ.ಎನ್.ಶೇಷನ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ, ಹಿರಿಯ ಸಂಶೋಧಕ ಷ.ಶೆಟ್ಟರ್, ಮಾತೆ ಮಾಣಿಕೇಶ್ವರಿ, ಹಿರಿಯ ಪತ್ರಕರ್ತ ಡಾ.ಪಾಟಿಲ್ ಪುಟ್ಟಪ್ಪ ಅವರಿಗೆ ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂದು ಅವರು ಹೇಳಿದರು.

ಮಾ.3ರಂದು ಸಭಾಧ್ಯಕ್ಷರ ಪ್ರಾಸ್ತಾವಿಕ ನುಡಿಗಳಿಂದ ಆರಂಭವಾದ ಸಂವಿಧಾನದ ಕುರಿತು ವಿಶೇಷ ಚರ್ಚೆಯಲ್ಲಿ 47 ಜನ ಸದಸ್ಯರು ಪಾಲ್ಗೊಂಡು 27.46 ಗಂಟೆ ಚರ್ಚೆ ಮಾಡಿದ್ದಾರೆ. ಎಂ.ಕೃಷ್ಣಾರೆಡ್ಡಿ ರಾಜೀನಾಮೆಯಿಂದ ತೆರವಾದ ಉಪ ಸಭಾಧ್ಯಕ್ಷರ ಸ್ಥಾನಕ್ಕೆ ಆನಂದ್ ಮಾಮನಿ ಮಾ.24 ರಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಮಿತಿಗಳ 12 ವರದಿಗಳು, 13 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. 270 ಅಧಿಸೂಚನೆಗಳು, 2 ಆಧ್ಯಾದೇಶ, 140 ವಾರ್ಷಿಕ ವರದಿಗಳು ಹಾಗೂ 100 ಲೆಕ್ಕಪರಿಶೋಧನ ವರದಿಗಳನ್ನು ಮಂಡನೆ ಮಾಡಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

2020-21ನೆ ಸಾಲಿನ ಅನುದಾನಗಳ ಬೇಡಿಕೆಯನ್ನು ಮುಖ್ಯಮಂತ್ರಿ ಮಾ.12ರಂದು ಮಂಡಿಸಿದ್ದು, ಮಾ.24ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. ಧನ ವಿನಿಯೋಗ ವಿಧೇಯಕ ಸೇರಿದಂತೆ ಒಟ್ಟು 26 ವಿಧೇಯಕಗಳನ್ನು ಮಂಡಿಸಲಾಗಿದ್ದು, ಈ ಪೈಕಿ 25 ವಿಧೇಯಕಗಳನ್ನು ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಿಧೇಯಕವನ್ನು ಹೆಚ್ಚಿನ ಪರಿಶೀಲನೆಗಾಗಿ ಜಂಟಿ ಪರಿಶೀಲನಾ ಸಮಿತಿಗೆ ವಹಿಸಲಾಗಿದೆ ಎಂದು ಅವರು ಹೇಳಿದರು.

ನಿಯಮ 60ರಡಿ ನೀಡಲಾಗಿದ್ದ 5 ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿತ್ತು. ಅವುಗಳು ಸೇರಿದಂತೆ ಒಟ್ಟು 40 ಸೂಚನೆಗಳನ್ನು ಸ್ವೀಕರಿಸಿ, 20 ಸೂಚನೆಗಳನ್ನು ಚರ್ಚಿಸಲಾಗಿದೆ. ಶೂನ್ಯವೇಳೆಯಲ್ಲಿ ಒಟ್ಟು 36 ಸೂಚನೆಗಳನ್ನು ಸ್ವೀಕರಿಸಿ, 23 ಸೂಚನೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಒಟ್ಟು 2 ಹಕ್ಕುಚ್ಯುತಿ ಸೂಚನೆಗಳನ್ನು ಸ್ವೀಕರಿಸಿ, ಅವುಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಆವಕಾಶ ನೀಡಿ ಮುಕ್ತಾಯಗೊಳಿಸಲಾಗಿದೆ. ನಿಯಮ 363ರ ಅನುಮತಿ ಕೋರಿ ಎರಡು ಸೂಚನೆಗಳು ಬಂದಿದ್ದು, ಆವುಗಳನ್ನು ಚರ್ಚಿಸಿ ಮುಕ್ತಾಯಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಅವಧಿಯಲ್ಲಿ 3612 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸುವ 210 ಪ್ರಶ್ನೆಗಳ ಪೈಕಿ 196, ಲಿಖಿತ ಮೂಲಕ ಉತ್ತರಿಸುವ 2,593 ಪ್ರಶ್ನೆಗಳ ಪೈಕಿ 2,323 ಪ್ರಶ್ನೆಗಳಿಗೆ ಉತ್ತರ ಸ್ವೀಕರಿಸಲಾಗಿದೆ. 13 ಸೂಚನೆಗಳು ತಿರಸ್ಕೃತಗೊಂಡಿದ್ದು, 136 ಸೂಚನೆಗಳು ಹೆಚ್ಚುವರಿಯಾಗಿರುತ್ತದೆ. 4 ಪ್ರಶ್ನೆಗಳನ್ನು ಅರ್ಧಗಂಟೆ ಕಾಲಾವಧಿಗೆ ಚರ್ಚಿಸಲು ಅವಕಾಶ ನೀಡಲಾಗಿದೆ. ನಿಯಮ 351ರಡಿ ಸ್ವೀಕರಿಸಲಾದ 158 ಸೂಚನೆಗಳಲ್ಲಿ 120 ಸೂಚನೆಗಳು ಅಂಗೀಕೃತಗೊಂಡು ಅದರಲ್ಲಿ 83 ಸೂಚನೆಗಳಿಗೆ ಉತ್ತರ ಸ್ವೀಕರಿಸಲಾಗಿದೆ ಎಂದು ಸ್ಪೀಕರ್ ಹೇಳಿದರು.

2 ಖಾಸಗಿ ನಿರ್ಣಯಗಳನ್ನು ಸ್ವೀಕರಿಸಿ, ಸದನದಲ್ಲಿ ಮಂಡಿಸಲಾಗಿದೆ. ನಿಯಮ 73ರಮೇರೆಗೆ 358 ಗಮನಸೆಳೆಯುವ ಸೂಚನೆ ಸ್ವೀರಕಸಿ, 54 ಸೂಚನೆಗಳಬಗ್ಗೆ ಸದನದಲ್ಲಿ ಚರ್ಚೆ ನಡೆಸಿ, 92 ಸೂಚನೆಗಳ ಉತ್ತರ ಮಂಡಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

ಸೂಚನೆ ಕಟ್ಟುನಿಟ್ಟಾಗಿ ಪಾಲಿಸೋಣ

ಕೋವಿಡ್ 19ರ ಕುರಿತು ಸದನದಲ್ಲಿ ವಿವರವಾಗಿ ಚರ್ಚೆ ನಡೆಸಲಾಗಿದೆ. ನಾವು ಸ್ವಯಂ ನಿಯಂತ್ರಣ ಶಿಸ್ತು ಹಾಕಿಕೊಂಡು, ಸರಕಾರದ ಸೂಚನೆಗಳನ್ನು ಪಾಲನೆ ಮಾಡಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಅಗತ್ಯವಿದೆ. ಲಾಕ್‍ಡೌನ್ ರೀತಿಯಲ್ಲಿ ನಾವು ಸಹ ಮನೆಯಲ್ಲಿ ಇರೋಣ.

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News