ಆರ್ಥಿಕ ಇತಿಮಿತಿಯಲ್ಲೂ ಬಜೆಟ್ ನಲ್ಲಿ ನೀರಾವರಿಗೆ 21,308 ಕೋಟಿ ರೂ.: ಮುಖ್ಯಮಂತ್ರಿ

Update: 2020-03-24 16:47 GMT

ಬೆಂಗಳೂರು, ಮಾ.24: ಆರ್ಥಿಕ ಇತಿಮಿತಿಯಲ್ಲೂ ನೀರಾವರಿಗೆ ಪ್ರಸ್ತುತ ವರ್ಷಕ್ಕೆ 21,308 ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಇದಲ್ಲದೆ, ಕೃಷ್ಣ ಮೇಲ್ದಂಡೆ ಯೋಜನೆ 3ನೆ ಹಂತದ ಅನುಷ್ಠಾನಕ್ಕಾಗಿ ಅದರಲ್ಲೂ ವಿಶೇಷವಾಗಿ 21 ಗ್ರಾಮಗಳ ಪುನರ್ ವಸತಿ ಕಾರ್ಯಕೈಗೊಳ್ಳಲು 10 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ 2020-21ನೆ ಸಾಲಿನ ಬಜೆಟ್ ಮೇಲೆ ನಡೆದ ಚರ್ಚೆಗೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಉತ್ತರ ಕರ್ನಾಟಕದ ಪ್ರತಿಷ್ಠಿತ ಮಹಾದಾಯಿ ಯೋಜನೆಯನ್ನು ಅನುಷ್ಠಾನಗೊಳಿಸಲು ಅವಶ್ಯಕವಾಗಿರುವ ಅಧಿಸೂಚನೆಯನ್ನು ಕೇಂದ್ರ ಸರಕಾರ ಹೊರಡಿಸಿದೆ. ಈ ಬಜೆಟ್‍ನಲ್ಲಿ ಈ ಯೋಜನೆಯ ಪ್ರಗತಿ ಸಾಧಿಸಲು 500 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದರು.

ಬರಪೀಡಿತ ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆ ಎತ್ತಿನಹೊಳೆ ಯೋಜನೆಯ ಸಲುವಾಗಿ 1,500 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿನ ಏತನೀರಾವರಿ ಯೋಜನೆಗಳಿಗಾಗಿ ಪ್ರಥಮ ಬಾರಿಗೆ 5,000 ಕೋಟಿ ರೂ.ಗಳ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಕೃಷಿಗೆ ಉತ್ತೇಜನ ನೀಡಲು ದೇಶದ ಇತಿಹಾಸದಲ್ಲಿ ಕೇಂದ್ರದ ಆಯವ್ಯಯದಲ್ಲಿ ಕೃಷಿಗೆ ಶೇ.95 ರಷ್ಟು ಹಣ ಮೀಸಲಿಟ್ಟಿದೆ. ಅಂದರೆ 2.83 ಲಕ್ಷ ಕೋಟಿ ರೂ., ಇದರ ಫಲ ರಾಜ್ಯಕ್ಕೂ ಲಭಿಸಲಿದೆ. ನೀರಿನ ಭದ್ರತೆ, ಭೂ ಸಂಚಯ ಮತ್ತು ಸಾಮೂಹಿಕ ಕೃಷಿಯನ್ನು ಪ್ರೋತ್ಸಾಹಿಸಲು, ಸೂಕ್ಷ್ಮ ನೀರಾವರಿ ಕೃಷಿಕರ ಉತ್ತೇಜನ, ಕೃಷಿ ಉತ್ಪನ್ನ ಸಂಸ್ಕರಣೆ, ಮಾರುಕಟ್ಟೆಯ ಪ್ರೋತ್ಸಾಹ ಮತ್ತು ಕೃಷಿ ಹಾಗೂ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಸರಕಾರ ಹೊಸ ಕೃಷಿ ನೀತಿ ಜಾರಿಗೆ ತರಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರಕಾರ ಘೋಷಿಸಿದ್ದ ಹೆಚ್ಚುವರಿ 4 ಸಾವಿರ ರೂ. ನೆರವನ್ನು ಈವರೆಗೆ 41 ಲಕ್ಷ ಬ್ಯಾಂಕ್ ಖಾತೆಗಳಿಗೆ 825 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಈ ಯೋಜನೆಯನ್ನು ಮುಂದುವರೆಸಲು 2020-21ನೆ ಸಾಲಿನಲ್ಲಿ 2,600 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬರ ನಿರೋಧಕ ಬೆಳೆಗಳನ್ನು ಪ್ರೋತ್ಸಾಹಿಸಲು ಈಗಾಗಲೆ ಘೋಷಿಸಲಾಗಿರುವ 'ರೈತ ಸಿರಿ' ಯೋಜನೆಯನ್ನು ವಿಸ್ತರಿಸಿ 2020-21ನೆ ಸಾಲಿನಲ್ಲಿ ಟೆಫ್, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳನ್ನು ಸೇರ್ಪಡೆ ಮಾಡಲಾಗುವುದು ಅವರು ತಿಳಿಸಿದರು.

ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಆ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಈ ವರ್ಷ 1,500 ಕೋಟಿ ರೂ.ಅನುದಾನವನ್ನು ನೀಡಲಾಗಿದೆ. ಇದಲ್ಲದೆ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಂಸ್ಕೃತಿ ಸಂಘವನ್ನು ಹೊಸದಾಗಿ ರಚಿಸಲಾಗಿದೆ ಎಂದು ಅವರು ಹೇಳಿದರು.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಸ್ವಯಂ ಉದ್ಯೋಗ ಮತ್ತು ಯುವ ಸಬಲೀಕರಣಕ್ಕಾಗಿ 500 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು. ಇದಲ್ಲದೆ, ರಾಜ್ಯದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ 3,060 ಕೋಟಿ ರೂ.ಗಳನ್ನು ಪ್ರಸ್ತುತ ಸಾಲಿನಲ್ಲಿ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

2020-21ನೆ ಸಾಲಿನ ಆಯವ್ಯಯದಲ್ಲಿ ಮಹಿಳೆಯ ಸರ್ವಾಂಗೀಣ ಅಭಿವೃದ್ಧಿಗಾಗಿ 953 ಕಾರ್ಯಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಈ ವರ್ಷದ ಆಯವ್ಯಯದ ವಿಶೇಷತೆ ಏನೆಂದರೆ ಪ್ರಥಮ ಬಾರಿಗೆ ನಮ್ಮ ಸರಕಾರ ಮಕ್ಕಳ ಆಯವ್ಯಯವನ್ನು ಮಂಡಿಸಿದೆ. ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ 279 ಕಾರ್ಯಕ್ರಮಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಬೆಂಗಳೂರು ನಗರದ ಘನ ತ್ಯಾಜ್ಯ ನಿರ್ವಹಣೆಗೆ 'ಶುಭ್ರ ಬೆಂಗಳೂರು' ಯೋಜನೆಯಡಿ 999 ಕೋಟಿ ರೂ. ಅನುದಾನದ ಕ್ರಿಯಾ ಯೋಜನೆಯನ್ನು ಸರಕಾರ ಅನುಮೋದಿಸಿದೆ. ಪ್ರಸ್ತುತ ವರ್ಷದಲ್ಲಿ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ದೇಶದಲ್ಲಿಯೆ ಬೆಂಗಳೂರು ನಗರವನ್ನು ಘನತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ನಗರವನ್ನಾಗಿ ಮಾರ್ಪಡಿಸಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರು ನಗರಕ್ಕೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಲ್ಲಿ ನೀರಿನ ಪೈಪ್‍ಲೈನ್ ಹಾಗೂ ಒಳಚರಂಡಿ ವ್ಯವಸ್ಥೆ ನಿರ್ಮಿಸಲಾಗುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ 1000 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಬೆಂಗಳೂರು ನಗರದ ಸಬ್-ಅರ್ಬನ್ ರೈಲು ಯೋಜನೆಗೆ 500 ಕೋಟಿ ರೂ.ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

2020-21ನೆ ಸಾಲಿನಲ್ಲಿ ಬೆಂಗಳೂರು ಅಭಿವೃದ್ಧಿ ವಲಯಕ್ಕೆ 8,772 ಕೋಟಿ ರೂ., ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ವಲಯಕ್ಕೆ 4,552 ಕೋಟಿ ರೂ., ಆಡಳಿತ ಸುಧಾರಣೆ ಮತ್ತು ಸಾರ್ವಜನಿಕರ ಸೇವೆಗಳು ವಲಯಕ್ಕೆ 10,194 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದ ಜನತೆ ಎಷ್ಟೇ ಸಂಕಷ್ಟ ಎದುರಿಸಲಿ, ಅವರಿಗೆ ಎಷ್ಟೇ ಕಷ್ಟಗಳು ಬಂದರೂ ಸರಕಾರ ಅವರ ಪರವಾಗಿದೆ. ಸಂಕಷ್ಟಗಳಿಂದ ನಮ್ಮ ಅರ್ಥಿಕ ಪರಿಸ್ಥಿತಿಯ ಮೇಲೆ ಎಷ್ಟೆ ಒತ್ತಡ ಬಂದರೂ ಅದನ್ನು ನಿಭಾಯಿಸುವ ಶಕ್ತಿ ಸರಕಾರಕ್ಕಿದೆ. ಯಾವುದೆ ಕಾರಣಕ್ಕೂ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಆಗುವುದಿಲ್ಲ. ಸಂಪನ್ಮೂಲ ಕ್ರೋಡೀಕರಿಸುವ ಜೊತೆಗೆ ಬೇರೆ ಬೇರೆ ಸ್ಥಳೀಯ ಮತ್ತು ವಿದೇಶಿ ಹಣಕಾಸು ಸಂಸ್ಥೆಗಳಲ್ಲಿ ಸಾಲಗಳನ್ನು ಪಡೆಯುವ ಪ್ರಯತ್ನ ಮಾಡುತ್ತೇನೆ. ಹಾಗೆಯೇ ಯಾವುದೇ ಕಾರಣಕ್ಕೂ ವಿತ್ತೀಯ ಶಿಸ್ತನ್ನು ಮೀರುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.

ಪದವಿ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ವಿತರಿಸಲಾಗುತ್ತಿರುವ ಲ್ಯಾಪ್‍ಟಾಪ್ ಖರೀದಿಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲು ಸದನ ಸಮಿತಿಯನ್ನು ರಚಿಸುವಂತೆ ಆಗ್ರಹಿಸಿ ವಿಪಕ್ಷಗಳು ಸದನದಲ್ಲಿ ಧರಣಿ ನಡೆಸಿದವು. ವಿಪಕ್ಷಗಳ ಒತ್ತಡಕ್ಕೆ ಮುಖ್ಯಮಂತ್ರಿ ಮಣಿಯದ ಹಿನ್ನೆಲೆಯಲ್ಲಿ ಕಲಾಪವನ್ನು ಬಹಿಷ್ಕರಿಸಿ ವಿಪಕ್ಷಗಳು ಸಭಾತ್ಯಾಗ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News