ರಾಜ್ಯ ರಾಜಧಾನಿಯ 22 ಸಾವಿರ ಮಂದಿ ಹೋಮ್ ಕ್ವಾರಂಟೈನ್‍ನಲ್ಲಿ !

Update: 2020-03-27 12:12 GMT

ಬೆಂಗಳೂರು, ಮಾ.27: ನಗರದಲ್ಲಿ ಒಟ್ಟು 22 ಸಾವಿರ ಜನ ಹೋಮ್ ಕ್ವಾರೆಂಟೈನ್‍ನಲ್ಲಿದ್ದಾರೆ. ಇವರ ಪ್ರಥಮ ಸಂಪರ್ಕದಲ್ಲಿ 3,500 ಜನ ಇದ್ದಾರೆ. ಇವರಿಗೂ ಮುದ್ರೆ ಹಾಕಿ ಹೋಮ್ ಕ್ವಾರೆಂಟೈನ್ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಕೊರೋನ ವೈರೆಸ್ ಸೋಂಕು ಉಂಟಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಸಮಿತಿ ರಚಿಸಲಾಗಿದ್ದು, ನಗರದಲ್ಲಿ ಕೊರೋನ ವೈರಸ್ ಸೋಂಕಿನ ಪ್ರಸಕ್ತ ಸ್ಥಿತಿಗತಿಗಳು ಹಾಗೂ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೊರೋನ ವೈರಸ್ ಸೋಂಕಿತರಿಗಾಗಿಯೇ 73 ಆ್ಯಂಬುಲೆನ್ಸ್ ಮೀಸಲಿರಿಸಲಾಗಿದೆ. ನಿರ್ಗತಿಕರಿಗೆ ಹಾಗೂ ಬಡವರ್ಗದವರಿಗೆ ಪಾಲಿಕೆಯಿಂದಲೇ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಇರುವ ಜಾಗದಲ್ಲೇ ಎನ್.ಜಿ.ಒ ಪಾಲಿಕೆ ಸದಸ್ಯರ ಸಹಕಾರದಲ್ಲಿ ಊಟ ನೀಡಲಾಗುವುದು ಎಂದು ಹೇಳಿದರು.

ದಿನಸಿ ತೆಗೆದುಕೊಳ್ಳುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಹಾಲು ಮತ್ತು ತರಕಾರಿ ಖರೀದಿಗೆ ಚರ್ಚೆ ಮಾಡಿ ಸಮಯ ನಿಗದಿ ಮಾಡಲಾಗುವುದು. ಸದ್ಯ ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವಾಗಿಲ್ಲ. ಮಸೀದಿ ಮುಖ್ಯಸ್ಥರೊಂದಿಗೆ ಚರ್ಚೆ ಮಾಡಲಾಗಿದ್ದು, ಅವರು ಸಹಕಾರ ನೀಡಿದ್ದಾರೆ. ಕೊರೋನ ಬಗ್ಗೆ ಜಾಗೃತಿ ಮೂಡಿಸುವುದಾಗಿ ಭರವಸೆ ನೀಡಿದ್ದಾರೆ. 21 ದಿನ ಯಜ್ಞದಂತೆ ಕಳೆಯಬೇಕಾಗಿದೆ ಎಂದರು.

ಕೊರೋನ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ಅನುದಾನ ಬಳಸಿಕೊಳ್ಳಲು ಸಂಪೂರ್ಣ ಸಹಕಾರ ನೀಡಲಾಗಿದೆ. ಕೊರೋನ ವೈರಸ್ ಸೋಂಕಿಗೆ ಸಂಬಂಧಿಸಿದ ವೈದ್ಯಕೀಯ ಉಪಕರಣ ಖರೀದಿಗೆ ಅನುದಾನ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

ಕೊರೋನ ವೈರಸ್ ಸೋಂಕು ತಡೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 66.85 ಕೋಟಿ ರೂ. ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 1,029 ಕೋಟಿ ರೂ. ಇದೆ. ಕನಿಷ್ಠ 5 ಕೋಟಿ ರೂ. ಇರಿಸುವಂತೆ ಸೂಚನೆ ನೀಡಲಾಗಿದೆ.

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News