ವೈದ್ಯಕೀಯ ಸಿಬ್ಬಂದಿಗಳಿಗೆ ವೈಯಕ್ತಿಕ ರಕ್ಷಣಾ ಸಾಮಗ್ರಿಗಳ ಕೊರತೆಯಿದೆ: ಸಿದ್ದರಾಮಯ್ಯ

Update: 2020-03-27 17:28 GMT

ಬೆಂಗಳೂರು, ಮಾ.27: ವೈದ್ಯಕೀಯ ಸಿಬ್ಬಂದಿಗಳಿಗೆ ವೈಯಕ್ತಿಕ ರಕ್ಷಣಾ ಸಾಮಗ್ರಿಗಳ ಕೊರತೆಯಿದೆ. ವೈದ್ಯರು, ಶುಶ್ರೂಷಕರು ಜೀವವನ್ನು ಪಣಕ್ಕಿಟ್ಟು ಹಗಲು ರಾತ್ರಿಯೆನ್ನದೆ ರೋಗಿಗಳ ಸೇವೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಜನರ ಆರೋಗ್ಯದಷ್ಟೆ ಇವರ ಆರೋಗ್ಯವು ಮುಖ್ಯ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಕೊರೋನ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಟಾಸ್ಕ್ ಫೋರ್ಸ್ ಮಾಡಿದೆ. ಅದರ ಕಾರ್ಯಾಚರಣೆ ಬಗ್ಗೆ ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ವಿರೋಧ ಪಕ್ಷವಾಗಿ ನಾವು ಸರಕಾರಕ್ಕೆ ಸಲಹೆ, ಸೂಚನೆ ನೀಡಲು ಬಯಸಿದ್ದೇವೆ. ಹಾಗಾಗಿ ಕೂಡಲೆ ಸರಕಾರ ಸರ್ವಪಕ್ಷಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರಿಗೆ ದವಸ, ಧಾನ್ಯಗಳನ್ನು ವಿತರಣೆ ಮಾಡುವುದಾಗಿ ಹೇಳಿವೆ. ಹಲವೆಡೆ ಜಿಲ್ಲಾಧಿಕಾರಿಗಳು ಸರಕಾರದ ಅದೇಶಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯ ಸರಕಾರ ವಿಳಂಬ ಮಾಡದೆ ಆಹಾರ ಧಾನ್ಯಗಳ ವಿತರಣೆಗೆ ಆದೇಶ ಹೊರಡಿಸಿ, ಎ.1ರ ಒಳಗಾಗಿ ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದ ಬೇರೆ ಭಾಗಗಳಿಂದ, ಹೊರ ರಾಜ್ಯಗಳಿಂದ ವಲಸೆ ಬಂದಿರುವಂತಹ ಕಾರ್ಮಿಕರು ಪಟ್ಟಣ ಪ್ರದೇಶಗಳಲ್ಲಿದ್ದಾರೆ. ಕರ್ಫ್ಯೂಯಿಂದಾಗಿ ಅವರಿಗೆ ಉದ್ಯೋಗವಿಲ್ಲದಂತಾಗಿದೆ. ಕೂಡಲೆ ಇಂದಿರಾ ಕ್ಯಾಂಟೀನ್‍ಗಳ ಮೂಲಕ ಅವರಿಗೆ ಆಹಾರ ಒದಗಿಸುವ ಕೆಲಸ ಆಗಬೇಕು. ಹೆಚ್ಚು ಕಾರ್ಮಿಕರಿರುವ ಜಾಗಗಳಿಗೆ ಸಂಚಾರಿ ಇಂದಿರಾ ಕ್ಯಾಂಟೀನ್ ಬಳಕೆ ಮಾಡಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ರೈತರ ಹಣ್ಣು ತರಕಾರಿಗಳು ಮಾರುಕಟ್ಟೆ ಸಿಗದೆ ಕೊಳೆತು ಹೋಗುತ್ತಿದೆ. ಹಾಗಾಗಿ ಈ ಕೂಡಲೆ ಸರಕಾರ ಎಪಿಎಂಸಿ ಮಾರುಕಟ್ಟೆ ತೆರೆದು, ಅವುಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಕೊಂಡುಕೊಳ್ಳಬೇಕು. ಇದರಿಂದ ರೈತರಿಗೆ ಆಗಬಹುದಾದ ಬಹುದೊಡ್ಡ ನಷ್ಟವನ್ನು ತಪ್ಪಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ರೇಶ್ಮೆಗೂಡು ಖರೀದಿಗೆ ಸರಕಾರ ಅಗತ್ಯ ಸ್ಥಳಗಳಲ್ಲಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ಇನ್ನು ಕೆಲವೆ ದಿನಗಳಲ್ಲಿ ಮೈಸೂರು, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಲಿದ್ದು, ಬೀಜ, ಗೊಬ್ಬರ ಹಾಗೂ ಕೀಟನಾಶಕಗಳ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News