ಭಾರತದಲ್ಲಿ ಕೊರೋನ ವೈರಸ್ 3ನೆ ಹಂತ ತಲುಪಿರಬಹುದು

Update: 2020-03-28 14:50 GMT

► ಸರಕಾರದ ಬಳಿ ಸಾಕಷ್ಟು ತಪಾಸಣಾ ಕಿಟ್‌ಗಳಿಲ್ಲ

► ಕೊರೋನ ಹಾವಳಿ ತಡೆಗಟ್ಟಲು ನಮಗೆ ಸಮಯ ಮೀರುತ್ತಿದೆ

ಹೊಸದಿಲ್ಲಿ, ಮಾ.27: ಭಾರತದಲ್ಲಿ ಕೊರೋನ ವೈರಸ್ ಅಟ್ಟಹಾಸಕ್ಕೆ ಬಲಿಯಾದವರ ಸಂಖ್ಯೆ 20ಕ್ಕೇರಿರುವಂತೆಯೇ, ದೇಶದಲ್ಲಿ ಈ ಮಾರಕ ಸೋಂಕು ರೋಗದ ಹರಡುವಿಕೆಯು ಮೂರನೇ ಹಂತಕ್ಕೆ ತಲುಪಿರಬಹುದು ಎಂದು ಕೋವಿಡ್-19 ಆಸ್ಪತ್ರೆಗಳಿಗಾಗಿನ ಕಾರ್ಯಪಡೆಯ ಸಂಚಾಲಕ ಡಾ.ಗಿರಿಧರ್ ಗ್ಯಾನಿ ಬಹಿರಂಗಪಡಿಸಿದ್ದಾರೆ. ಕೊರೋನ ವೈರಸ್ ಸೋಂಕು, ತನ್ನ ಮೂರನೆ ಹಂತದಲ್ಲಿ ಸಾಮುದಾಯಿಕವಾಗಿ ಹರಡಲಾರಂಭಿಸುತ್ತದೆ ಎಂದವರು ‘thequint.com’ ಜಾಲತಾಣ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೊರೋನ ವೈರಸ್‌ನ ಸಾಮುದಾಯಿಕ ಹರಡುವಿಕೆಯು ಅತ್ಯಂತ ನಿರ್ಣಾಯಕ ಹಂತವಾಗಿದೆ.

ಈ ಹಂತದಲ್ಲಿ ಸೋಂಕು ರೋಗವು ಸಮಾಜದಲ್ಲಿ ವೇಗವಾಗಿ ಹರಡತೊಡಗುತ್ತದೆ ಹಾಗೂ ಅದರ ಮೂಲವನ್ನು ಕಂಡುಹಿಡಿಯುವುದೇ ಕಷ್ಟಕರವಾಗಲಿದೆ. ಈ ಮಹಾಮಾರಿಯನ್ನು ನಿಯಂತ್ರಿಸಲು ಮುಂದಿನ ಐದರಿಂದ ಹತ್ತು ದಿನಗಳು ನಿರ್ಣಾಯಕವಾದುದಾಗಿದೆ. ಯಾಕೆಂದರೆ, ಈಗಾಗಲೇ ಸೋಂಕು ರೋಗಕ್ಕೀಡಾದವರು ಈ ಅವಧಿಯಲ್ಲಿ ತಮ್ಮ ರೋಗಲಕ್ಷಣಗಳನ್ನು ನಿಖರವಾಗಿ ಪ್ರದರ್ಶಿಸುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ.

ಕೊರೋನ ವೈರಸ್-19 ಸೋಂಕಿತರಿಗಾಗಿ ಆಸ್ಪತ್ರೆಗಳನ್ನು ಸಿದ್ಧಪಡಿಸಲು ನಮಗೆ ಸಮಯ ಮೀರುತ್ತಿದೆ. ಮುಂಬರುವ ವಾರಗಳಲ್ಲಿ ಭಾರತದಲ್ಲಿ ಯಾವುದೇ ದಿನದಲ್ಲೂ ಕೊರೋನ ಸೋಂಕು ಒಮ್ಮೆಗೇ ಭುಗಿಲೇಳಬಹುದು. ಆದರೆ ನಮ್ಮ ಬಳಿ ಸಾಕಷ್ಟು ತರಬೇತು ಪಡೆದ ವೈದ್ಯಕೀಯ ಸಿಬ್ಬಂದಿ ಹಾಗೂ ಕೋವಿಡ್-19 ಆಸ್ಪತ್ರೆಗಳಿಲ್ಲ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನ ವೈರಸ್ ಶಂಕಿತರ ತಪಾಸಣೆ ಮಾಡುವಲ್ಲಿ ಸರಕಾರವು ಹಳೆಯ ಕಾಲದ ಜಿಗುಟು ನೀತಿಗಳನ್ನೇ ಅನುಸರಿಸುತ್ತಿದೆಯೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರವು ಕೆಮ್ಮು, ಉಸಿರಾಟದ ಸಮಸ್ಯೆಹಾಗೂ ಜ್ವರದ ಲಕ್ಷಣಗಳನ್ನು ಒಟ್ಟಾಗಿ ಪ್ರದರ್ಶಿಸುವವರನ್ನು ಮಾತ್ರ ತಪಾಸಣೆ ನಡೆಸುತ್ತಿದೆ. ಒಂದು ವೇಳೆ ರೋಗಿಯು ಈ ಪೈಕಿ ಒಂದೇ ಒಂದು ಲಕ್ಷಣ ಪ್ರದರ್ಶಿಸಿದ್ದಲ್ಲಿ ಆತ ಚಿಕಿತ್ಸೆಗೊಳಗಾಗುವುದಿಲ್ಲ ಎಂದು ಗ್ಯಾನಿ ತಿಳಿಸಿದರು.

ಏನಿದು ಮೂರನೇ ಹಂತ? 

ಮೊದಲ ಹಾಗೂ ಎರಡನೆ ಹಂತದಲ್ಲಿ ಕೊರೋನ ವೈರಸ್ ಸೋಂಕು, ವಿದೇಶದಿಂದ ಆಗಮಿಸಿದವರು ಹಾಗೂ ಅವರ ಜೊತೆ ಸಂಪರ್ಕಕ್ಕೆ ಬಂದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಆದರೆ ಮೂರನೆ ಹಂತದಲ್ಲಿ ಅದು ಸಮಾಜದೊಳಗೆ ವೇಗವಾಗಿ ಹರಡತೊಡಗುತ್ತದೆ. ಆಗ ಅದನ್ನು ನಿಯಂತ್ರಿಸುವುದು ಅತ್ಯಂತ ಕಷ್ಟಕರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News