ಸರಕಾರದ ನಿರ್ದೇಶನ ಪಾಲಿಸಲು ಡಿಸಿಎಂ ಕಾರಜೋಳ ಮನವಿ

Update: 2020-03-28 08:10 GMT

ಬಾಗಲಕೋಟೆ. ಮಾ.28: ಕೊರೋನ ನಿಯಂತ್ರಣಕ್ಕಾಗಿ ಸರಕಾರ ಹಾಗೂ ಜಿಲ್ಲಾಡಳಿತದ‌ ಸಲಹೆ ಸೂಚನೆಗಳನ್ನು ಸಾರ್ವಜನಿಕರು ಪಾಲಿಸಿ ತಮ್ಮ ತಮ್ಮ ಕುಟುಂಬ ಪರಿವಾರದ ಆರೋಗ್ಯ ರಕ್ಷಣೆಗಾಗಿ ಸಹಕರಿಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಮನವಿ ಮಾಡಿದ್ದಾರೆ.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕೊರೋನ ವೈರಸ್ ಕುರಿತು ಸಭೆ ನಡೆಸಿದ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಲ್ಕು ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ದಿನದ 24 ಗಂಟೆ ಕಾರ್ಯ‌ ನಿರ್ವಹಿಸುತ್ತಿವೆ. 16,929 ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ 91,717 ಜನರನ್ನು ತಪಾಸಣೆ ಮಾಡಲಾಗಿದೆ. ಜಿಲ್ಲೆಗೆ ವಿದೇಶಗಳಿಂದ ಹಿಂದಿರುಗಿದ 165 ಜನರನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿದೆ. 10 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಎಲ್ಲ ಮಾದರಿಗಳು ನೆಗಟಿವ್ ಆಗಿರುತ್ತವೆ ಎಂದರು.

 ಬಾಗಲಕೋಟೆ ನಗರದಲ್ಲಿರುವ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 12 ಬೆಡ್ ಗಳ ಐಸೊಲೇಷನ್ ವಾರ್ಡ್ ತೆರೆಯಲಾಗಿದೆ. ಜಿಲ್ಲೆಯಲ್ಲಿ 12 ಫೀವರ್ ಕ್ಲಿನಿಕ್ ಗಳನ್ನು ತೆರೆಯಲಾಗಿದೆ. 11 ವೆಂಟಿಲೇಟರ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 3 ತಾತ್ಕಾಲಿಕ ಹಾಸ್ಟಲ್ ಗಳನ್ನು ಗುರುತಿಸಿ, ಅದರಲ್ಲಿ ಎಸ್ ಐಸಿ ಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಐತಿಹಾಸಿಕ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.

ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸರಕು ಸಾಗಾಟ ವಾಹನಗಳ ಮಾಲಕರ ಜೊತೆಗೆ ಸಭೆ ನಡೆಸಿ ಅವಶ್ಯಕ ಸಾಮಗ್ರಿಗಳನ್ನು‌ ಮಾತ್ರ ಪೂರೈಕೆ ಮಾಡುವಂತೆ ಸೂಚಿಸಲಾಗಿದೆ. ಸಾರಿಗೆ ಸೇವೆಯನ್ನು ನಿರ್ಬಂಧಿಸಲಾಗಿದೆ. ಮಾರ್ಚ್ ತಿಂಗಳ ಪಡಿತರವನ್ನು ವಿತರಿಸಲಾಗಿದ್ದು, ಎಪ್ರಿಲ್ ಮೊದಲ ವಾರದಲ್ಲಿ ಎರಡು ತಿಂಗಳ ಪಡಿತರವನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು  ವಿತರಿಸಲಾಗುವುದು. ಸ್ವಚ್ಛತೆಯನ್ನು ಕಾಪಾಡಿ, ಶುದ್ದ ಕುಡಿಯುವ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾ ಆಡಳಿತ ಕೊರೋನ ನಿಯಂತ್ರಣಕ್ಕಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು‌ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News