‘ಕಟ್ಟುನಿಟ್ಟಿನ ಕ್ರಮ’ ಕೈಗೊಂಡಿದ್ದರೆ ಕೊರೋನ ಸೋಂಕಿತರ ಸಂಖ್ಯೆ ಏರುತ್ತಿರುವುದೇಕೆ?: ಕುಮಾರಸ್ವಾಮಿ ಅಸಮಾಧಾನ

Update: 2020-03-28 08:22 GMT

ಬೆಂಗಳೂರು, ಮಾ.28: ಕೊರೋನ ವೈರಸ್‌ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸರಕಾರದ ಪ್ರತಿನಿಧಿಗಳು ಹೇಳುತ್ತಿರುವುದರ ನಡುವೆಯೇ ಕರ್ನಾಟಕ ಸೋಂಕು ಪೀಡಿತರ ಪಟ್ಟಿಯಲ್ಲಿ ದೇಶದಲ್ಲೇ 3ನೇ ಸ್ಥಾನಕ್ಕೇರಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನಿತ್ಯವೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದು ಸರಕಾರದ ‘ಕಟ್ಟುನಿಟ್ಟಿನ ಕ್ರಮ’ಗಳನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ  ಹೊರಡಿಸಿದ ಲಾಕ್‌ಡೌನ್‌ ಹೊರತುಪಡಿಸಿ, ವೈರಸ್‌ ತಡೆಗೆ ಸರಕಾರ ಕ್ರಮಗಳನ್ನು ಕೈಗೊಂಡಿರುವುದು ನಿಜವೇ ಆಗಿದ್ದರೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಸವಲತ್ತು, ರಕ್ಷಣಾ ಕವಚಗಳನ್ನು ಪೂರೈಸಿದ್ದರೆ, ಚಿಕಿತ್ಸೆಗೆ ವೈದ್ಯಕೀಯ ಸಲಕರಣೆಗಳನ್ನು ನೀಡಿದ್ದರೆ ಸೋಂಕು ಶರವೇಗದಲ್ಲಿ ವ್ಯಾಪಿಸುತ್ತಿರುವುದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಒಂದು ಸಾವಿರ ವೆಂಟಿಲೇಟರ್, 10 ಲಕ್ಷ ಮಾಸ್ಕ್, 5 ಲಕ್ಷ ಕಿಟ್, 15 ಲಕ್ಷ ತ್ರೀ ಲೇಯರ್‌ ಮಾಸ್ಕ್‌ ಖರೀಸುವುದಾಗಿ ಸರಕಾರ ಹೇಳಿ ವಾರವಾಯ್ತು. ಒಂದು ವಾರದಲ್ಲಿ ಸೋಂಕು ತೀವ್ರಗತಿಯಲ್ಲಿ ಏರಿದೆ. ಆದರೆ ಸರಕಾರ ಹೇಳಿರುವುದೆಲ್ಲವೂ ಕಾರ್ಯಗತವಾಗಿದೆಯೇ? ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಸೋಂಕಿನ ವಿರುದ್ಧ ಇಷ್ಟು ನಿಧಾನದ ಕಾರ್ಯಾಚರಣೆ ಸರಿಯೇ ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಪ್ರೋತ್ಸಾಹ ಧನ ನೀಡುವಂತೆ ನಾನು ಕೋರಿದ್ದೆ. ಆದರೆ, ರಕ್ಷಣಾ ಕವಚವನ್ನೇ ನೀಡದಿರುವ ಬಗ್ಗೆ ಮಾಹಿತಿ ಇದೆ. ಜನ ರಸ್ತೆಗಳಿಯದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಲಾಗಿದೆ. ಅವರಿಗೂ ಸೂಕ್ತ ರಕ್ಷಣಾ ಕವಚಗಳಿಲ್ಲ. ವೈದ್ಯರು, ವೈದ್ಯಕೀಯ ಸಿಬ್ಬಂದಿಯಂತೆ ಪೊಲೀಸರಿಗೂ ರಕ್ಷಣಾ ಕವಚಗಳನ್ನು ವಿತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಎರಡು ಧ್ರುವ ನಿಜ: ಕೊರೋನ ವೈರಸ್‌ ಕುರಿತ ಸುದ್ದಿಗಳನ್ನು ಮಾಧ್ಯಮಗಳಿಗೆ ತಿಳಿಸುವ ವಿಚಾರದಲ್ಲಿ ಸರಕಾರದಲ್ಲಿ ಎರಡು ಧ್ರುವಗಳಿವೆ ಎಂದು ನಾನು ಮೊದಲೇ ಹೇಳಿದ್ದೆ. ಕೊರೋನ ನಿಯಂತ್ರಣದ ಜವಾಬ್ದಾರಿ ಒಬ್ಬ ಸಚಿವರ ಹೆಗಲಿಗೆ ವಹಿಸುವ ಮೂಲಕ ಆ ಮುಸುಕಿನ ಗುದ್ದಾಟ ಬಯಲಾಗಿದೆ. ಇದು ಮಾಧ್ಯಮಗಳಲ್ಲೂ  ವರದಿಯಾಗಿದೆ. ಈ ಸಂದರ್ಭದಲ್ಲಿ ಪ್ರತಿಷ್ಠೆ ಮುಖ್ಯವಲ್ಲ ಎಂದು ಸಲಹೆ ಮಾಡಿದ್ದಾರೆ.

ಸರಕಾರ ಮೊದಲು ಹೆಚ್ಚಿನ ಪ್ರಮಾಣದಲ್ಲಿ ವೈದ್ಯಕೀಯ ಪರಿಕರಗಳನ್ನು ಹೊಂದಿಸಿಕೊಳ್ಳಬೇಕು. ವೈದ್ಯರಿಗೆ ಸೂಕ್ತ ಸವಲತ್ತುಗಳನ್ನು ನೀಡಬೇಕು. ಘೋಷಣೆಗಳು ಹೇಳಿಕೆಗಳು ಅಷ್ಟಕ್ಕೆ ಸೀಮಿತವಾಗಬಾರದು, ಕಾರ್ಯರೂಪಕ್ಕೆ ಬರಬೇಕು ಇಲ್ಲವಾದರೆ ಜಗತ್ತನ್ನೇ ಆವರಿಸಿರುವ ಮಹಾಮಾರಿ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ "ಮರಣ ಮೃದಂಗ" ಬಾರಿಸುವ ಕಾಲ ದೂರವಿಲ್ಲ ಎಂದು ಕುಮಾರಸ್ವಾಮಿ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News