ಆರೋಗ್ಯ ಕಾಪಾಡಿಕೊಳ್ಳಲು ಮನೆಯಿಂದ ಹೊರಬರಬೇಡಿ: ಶ್ರೀರಾಮುಲು

Update: 2020-03-28 12:03 GMT

ರಾಮನಗರ, ಮಾ.28:  ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ 21 ದಿನಗಳು ಮನೆಯ ಒಳಗೆ ಇರುವಂತೆ ತಿಳಿಸಲಾಗಿದೆ. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮನವಿ ಮಾಡಿದರು.

ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಹರಡಂತೆ ನೋಡಿಕೊಳ್ಳಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರು ಪ್ರತಿದಿನ ಶ್ರಮ ಪಡುತ್ತಿದ್ದಾರೆ. ಅವರ ಶ್ರಮವನ್ನು ಅರ್ಥ ಮಾಡಿಕೊಳ್ಳಿ. ಅತಿ ಜರೂರು ಕೆಲಸ ಇದ್ದಾರೆ ಮಾತ್ರ ಮನೆಯಿಂದ ಹೊರಗೆ ಬನ್ನಿ ಎಂದರು.

ಕೊರೋನಾ ವೈರಸ್ ಸೋಂಕಿಗೆ ಯಾವುದೇ ಔಷಧಿ ಇಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು, ರೋಗ ತಡೆಗಟ್ಟಬಹುದು. ಜಿಲ್ಲೆಯಲ್ಲಿ ಕೋವಿಡ್ 19 ಗೆ ಸಂಬಂಧಿಸಿದಂತೆ 134 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. 71 ಜನ 14 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಶ್ರೀರಾಮುಲು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್-19 ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದ್ದು, 80 ಹಾಸಿಗೆಯನ್ನು ಆಸ್ಪತ್ರೆಯಲ್ಲಿ ಸಿದ್ಧಪಡಿಸಲಾಗಿದೆ. ಮುಂದುವರೆದಂತೆ ಇನ್ನೂ 100 ಹಾಸಿಗೆಯನ್ನು ಸಿದ್ಧಪಡಿಸಲಾಗುವುದು. ತೀವ್ರ ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಲು ನುರಿತ ವೈದ್ಯರ ತಂಡವನ್ನು ಕಳುಹಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಗ್ರಾಮ ಪಂ. ಮಟ್ಟದಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಪ್ರತಿ ದಿನ ಆಟೋ ಮೂಲಕ ಪ್ರಚಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಬೆಳೆದಂತಹ ರೇಷ್ಮೆಯನ್ನು ರೀಲರ್ ಗಳು ಖರೀದಿಸುತ್ತಿಲ್ಲ. ಇದರಿಂದ ರೇಷ್ಮೆ ಬೆಳೆಗಾರರಿಗೆ ತೊಂದರೆಯಾಗುತ್ತಿದೆ ಎಂದು ಅವರ ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಜಿಲ್ಲಾಡಳಿತದಿಂದ ರೇಷ್ಮೆ ಬೆಳೆಗೆ ಸಂಬಂಧಿಸಿದಂತೆ ವರದಿ ನೀಡಿ ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಾತನಾಡಿ, ಜಿಲ್ಲೆಯಲ್ಲಿ ಥರ್ಮಲ್ ಸ್ಕ್ಯಾನರ್ ಕೊರತೆ ಇದ್ದು, ಒದಗಿಸಿಕೊಡಬೇಕು. ಜಿಲ್ಲೆಯಲ್ಲೆ ಸ್ಯಾನಿಟೈಸರ್  ತಯಾರಿಸಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿಗೂ ಒದಗಿಸಲಾಗುವುದು. ವಲಸೆ ಬಂದಿರುವ ಕಾರ್ಮಿಕರನ್ನು ಈ ಸಂದರ್ಭದಲ್ಲಿ ಪುನಃ ಅವರ ಜಿಲ್ಲೆಗಳಿಗೆ ಕಳುಹಿಸುವುದು ಕಷ್ಟಕರವಾಗಿದೆ. ಅವರಿಗೆ ಬೇಕಿರುವ ಆಹಾರವನ್ನು ವ್ಯವಸ್ಥೆ ಮಾಡಲಾಗುವುದು ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಉಪವಿಭಾಗಾಧಿಕಾರಿ ದ್ರಾಕ್ಷಾಯಿಣಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಪದ್ಮಾ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News