ಸಿಎಎ ಪ್ರತಿಭಟನೆಗೆ ಬೆಂಬಲ: ವೈದ್ಯನ ಮೇಲೆ ಸಾಂಕ್ರಾಮಿಕ ರೋಗಗಳ ಕಾಯ್ದೆ ಹೇರಿದ ಆದಿತ್ಯನಾಥ್ ಸರಕಾರ

Update: 2020-03-28 13:03 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್‍ ನಲ್ಲಿ ಸಿಎಎ ವಿರುದ್ಧ ಮಹಿಳೆಯರು ನಡೆಸುತ್ತಿದ್ದ ಹೋರಾಟಕ್ಕೆ ಬೆಂಬಲ ನೀಡಿದ್ದ  ಹಾಗೂ ಅಲ್ಲಿನ ಮನ್ಸೂರ್ ಪಾರ್ಕ್ ಪ್ರದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ನಿಲ್ಲಿಸುವಂತೆ ಪೊಲೀಸರಿಂದ ಹಲವಾರು ಬಾರಿ ಎಚ್ಚರಿಕೆ ಪಡೆದಿದ್ದ ವೈದ್ಯ ಡಾ. ಆಶಿಷ್ ಮಿತ್ತಲ್ ಅವರ ಮೇಲೆ ಆದಿತ್ಯನಾಥ್ ಸರಕಾರ 1897ರ ಸಾಂಕ್ರಾಮಿಕ ರೋಗಗಳ ಕಾಯಿದೆ ಹೇರಿದೆ ಎಂದು thewire.in ವರದಿ ಮಾಡಿದೆ.

ಮಾರ್ಚ್ 23ರಂದು ಡಾ. ಆಶಿಷ್ ಅವರನ್ನು ಬಂಧಿಸಲಾಗಿತ್ತು. ಅದಾಗಲೇ ಅಲ್ಲಿನ ಸರಕಾರ ಕೊರೋನ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಹೇರಿತ್ತು. ಡಾ ಆಶಿಷ್ ಜತೆಗೆ ಉಮರ್ ಖಾಲಿದ್ ಅವರನ್ನೂ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿತ್ತು.

ಎಐಐಎಂಎಸ್‍ನಿಂದ ವೈದ್ಯಕೀಯ ಪದವಿ ಪಡೆದಿರುವ ಆಶಿಷ್ ಅಖಿಲ ಭಾರತ ಕಿಸಾನ್ ಮಜ್ದೂರ್ ಸಭಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಆದರೆ ಅಚ್ಚರಿಯೆಂದರೆ ಅವರ ವಿರುದ್ಧ ಆಡಳಿತ ಹೊರಿಸಿದ ಆರೋಪಕ್ಕೂ ಅವರ ಮೇಲೆ ಹೇರಲಾದ ಕಾಯಿದೆಗೂ ಯಾವುದೇ  ಸಂಬಂಧವಿಲ್ಲ. ಅಷ್ಟಕ್ಕೂ ಸಾಂಕ್ರಾಮಿಕ ರೋಗಗಳ ಕಾಯಿದೆಯು ರೋಗವನ್ನು ನಿಯಂತ್ರಿಸುವ ಉದ್ದೇಶದಿಂದ  ವ್ಯಕ್ತಿಗಳನ್ನು ಬಂಧಿಸಲು ಹಾಗೂ ದಂಡ ಹೇರಲು ಅಧಿಕಾರಿಗಳಿಗೆ ವಿಶೇಷಾಧಿಕಾರ ನೀಡುತ್ತದೆ. ಹೋರಾಟಗಾರರೊಬ್ಬರ ಸದ್ದಡಗಿಸಲು ದುರುದ್ದೇಶದಿಂದ ಈ ಕಾಯಿದೆ ಅವರ ಮೇಲೆ ಹೇರಲಾಗಿದೆ ಎಂದು ಮಜ್ದೂರ್ ಸಭಾ  ಆರೋಪಿಸಿದೆ.

ಕೆಲ ದಿನಗಳ ಹಿಂದೆ ಆಶಿಷ್ ಅವರ ಪತ್ನಿ, ಪ್ರಯಾಗ್ ರಾಜ್‍ನ ಖ್ಯಾತ   ಅಲ್ಟ್ರಾಸೌಂಡ್ ತಜ್ಞೆ ಡಾ ಮಾಧವಿ ಮಿತ್ತಲ್ ಅವರ ಕ್ಲಿನಿಕ್ ಮೇಲೆ ದಂಪತಿ ಹೊರ  ಹೋಗಿದ್ದ ಸಂದರ್ಭ ದಾಳಿ ನಡೆಸಿದ್ದ ಅಧಿಕಾರಿಗಳು  `ತಾಂತ್ರಿಕ ಕೊರತೆ'ಯ ನೆಪದಲ್ಲಿ ಅದನ್ನು ಸೀಲ್ ಮಾಡಿದ್ದನ್ನು  ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News