ಕೊರೋನ ಸಂಕಷ್ಟದ ನಡುವೆ 'ರಾಮಾಯಣ' ವೀಕ್ಷಿಸಿದ ಜಾವಡೇಕರ್ ವಿರುದ್ಧ ಟ್ವಿಟರಿಗರ ಆಕ್ರೋಶ

Update: 2020-03-28 13:10 GMT

ಹೊಸದಿಲ್ಲಿ: ಕೇಂದ್ರ ಮಾಹಿತಿ ಮತ್ತ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ ಧಾರಾವಾಹಿಯನ್ನು ತಾವು ವೀಕ್ಷಿಸುತ್ತಿರುವ ಫೋಟೋ ಟ್ವಿಟ್ಟರಿನಲ್ಲಿ ಶೇರ್ ಮಾಡಿ 'ಐ ಯಾಮ್  ವಾಚಿಂಗ್ ರಾಮಾಯಣ, ಆರ್ ಯೂ ?' ಎಂದು ಟ್ವೀಟ್ ಮಾಡಿದ್ದರು.

ಆದರೆ ಸರಕಾರ ಘೋಷಿಸಿದ ಲಾಕ್ ಡೌನ್‍ ನಿಂದಾಗಿ ದೇಶಾದ್ಯಂತ ಲಕ್ಷಗಟ್ಟಲೆ ಜನರು ಸಂಕಷ್ಟದಲ್ಲಿರುವಾಗ ಹಾಗೂ ಅಗತ್ಯ ವಸ್ತುಗಳಿಗೆ ಪರದಾಡುತ್ತಿರುವಾಗ ಕೇಂದ್ರ ಸಚಿವರೊಬ್ಬರು ತಮ್ಮ ಮನೆಯಲ್ಲಿ ಕುಳಿತುಕೊಂಡು ಧಾರಾವಾಹಿ ನೋಡುತ್ತಾ ಆ ಕುರಿತಂತೆ ಟ್ವೀಟ್ ಕೂಡ ಮಾಡಿದ್ದು ಟ್ವಿಟರಿಗರನ್ನು ಅದೆಷ್ಟು ಕೆರಳಿಸಿತೆಂದರೆ ಸಚಿವರು ಬಾರೀ ಟ್ರೋಲ್‍ ಗೊಳಗಾಗಿ ಕೊನೆಗೆ ತಮ್ಮ ಪೋಸ್ಟ್ ಡಿಲೀಟ್ ಮಾಡಬೇಕಾಯಿತು.

ನಂತರ ತಾವು ಮನೆಯಲ್ಲಿಯೇ ಕಚೇರಿ ಕೆಲಸ ನಿರ್ವಹಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ ಸಚಿವರು ``ಮನೆಯೇ ಕಚೇರಿಯಾಗಿದೆ. ಲಾಕ್ ಡೌನ್ ಸಂದರ್ಭ ಸಾರ್ವಜನಿಕರಿಗೆ ಕಷ್ಟ ಎದುರಾಗದಂತೆ ನೋಡಿಕೊಳ್ಳಲು ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ಘನ  ಕೈಗಾರಿಕೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳ  ಖಾತೆಯನ್ನೂ ಹೊಂದಿರುವ ಜಾವಡೇಕರ್ ಅವರ ಈ ಫಾಲೋ-ಅಪ್ ಟ್ವೀಟ್ ಕೂಡ ಟ್ವಿಟರಿಗರಿಗೆ ಹಿಡಿಸಿಲ್ಲ ಹಾಗೂ ಅವರ ಈ ಟ್ವೀಟ್‍ ಗೂ ಹಲವಾರು ಆಕ್ರೋಶಭರಿತ ಕಮೆಂಟ್‍ಗಳು ಬಂದಿವೆ. ಸಚಿವರು ಯಾರನ್ನು ಮೂರ್ಖರನ್ನಾಗಿಸಲು ಯತ್ನಿಸುತ್ತಿದ್ದಾರೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News