ಒಂದೇ ದಿನ 12 ಪ್ರಕರಣಗಳು ದೃಢ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆ

Update: 2020-03-28 15:30 GMT

ಬೆಂಗಳೂರು, ಮಾ.28: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಶುಕ್ರವಾರ ಸೋಂಕು ದೃಢಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.

ಗುರುವಾರ 64 ಇದ್ದ ಸೋಂಕಿತರ ಸಂಖ್ಯೆ ಒಂದು ದಿನದಲ್ಲಿಯೇ 76ಕ್ಕೆ ಏರಿಕೆಯಾಗಿದ್ದು, ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕ ಹಾಗೂ ಭೀತಿಯನ್ನುಂಟು ಮಾಡಿದೆ.

ಉತ್ತರ ಕನ್ನಡ ಮೂಲದ ಈ ಹಿಂದೆ ಸೋಂಕು ದೃಢಪಟ್ಟವರ ಪತ್ನಿ 54 ವರ್ಷದ ಮಹಿಳೆ, ಇವರ ಮಗಳಾದ 28 ವರ್ಷದ ಮಹಿಳೆ ಹಾಗೂ 23 ವರ್ಷದ ಯುವತಿಯಲ್ಲಿಯೂ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ನಿವಾಸಿಯಾದ 21 ವರ್ಷದ ವ್ಯಕ್ತಿ ಲಂಡನ್ ಗೆ  ಪ್ರಯಾಣಿಸಿ ಹಿಂದಿರುಗಿದ್ದ ಹಿನ್ನೆಲೆಯಿದ್ದು, ಈ ಹಿಂದೆ ಸೋಂಕು ಇದ್ದವರ ಸಂಪರ್ಕ ಹೊಂದಿದ್ದಾರೆ. ಇವರನ್ನು ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ಚಿಕ್ಕಬಳ್ಳಾಪುರದ 23 ವರ್ಷದ ಪುರುಷ, 70 ವರ್ಷದ ಪುರುಷ, 32 ವರ್ಷದ ಮಹಿಳೆ, 38 ವರ್ಷದ ಪುರುಷ ಹಾಗೂ 18 ವರ್ಷದ ಯುವಕ ಈ ಹಿಂದೆ ಸೋಂಕು ಇದ್ದವರ ಸಂಪರ್ಕದಲ್ಲಿದ್ದರು. ಇವರೆಲ್ಲರನ್ನೂ ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ. ಇನ್ನೊಬ್ಬರು 63 ವರ್ಷದ ಮಹಿಳೆ ಬೆಂಗಳೂರಿನವರಾಗಿದ್ದು, ಲಂಡನ್‍ ಗೆ ಪ್ರಯಾಣ ಮಾಡಿದ್ದರು. ಇವರಲ್ಲಿಯೂ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿರಿಸಲಾಗಿದೆ.

ದಾವಣಗೆರೆ ನಿವಾಸಿಯಾದ 20 ವರ್ಷದ ಪುರುಷರೊಬ್ಬರು ಈ ಹಿಂದೆ ಸೋಂಕು ತಗುಲಿದ ವ್ಯಕ್ತಿ ಸಂಪರ್ಕ ಹೊಂದಿದ್ದರು. ಇವರನ್ನು ದಾವಣಗೆರೆ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಗೊಳಿಸಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ 24 ವರ್ಷದ ಯುವಕ ಈ ಹಿಂದೆ ಸೋಂಕು ದೃಢಪಟ್ಟಿದ್ದವರ ಸಂಪರ್ಕದಲ್ಲಿದ್ದರು. ಅವರಲ್ಲಿಯೂ ಸೋಂಕು ದೃಢಪಟ್ಟಿದ್ದು, ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ಜಿಲ್ಲೆಗಳಲ್ಲಿ ಕೋವಿಡ್-19 ರ ಜೈವಿಕ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಸುರಕ್ಷಿತ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಮಾ.27ರಿಂದ ಎಲ್ಲ ಜಿಲ್ಲಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಮ್ಮ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ಕೋವಿಡ್-19 ತ್ಯಾಜ್ಯವನ್ನು ಪ್ರತಿದಿನವೂ ಸಂಗ್ರಹಿಸಿ ಸುರಕ್ಷಿತವಾಗಿ ವಿಲೇವಾರಿ ಮಾಡುವ ಸುತ್ತೋಲೆಯನ್ನು ಹೊರಡಿಸಲಾಗಿದೆ.

ದೈನಂದಿನ ಕೂಲಿ ಕಾರ್ಮಿಕರು ಹಾಗೂ ಬಡಜನರಿಗೆ ಬೆಳಗ್ಗೆ 7-30 ರಿಂದ 10, ಮಧ್ಯಾಹ್ನ 12:30ರಿಂದ 3 ಹಾಗೂ ರಾತ್ರಿ 7-30 ರಿಂದ 9 ಗಂಟೆವರೆಗೆ ಇಂದಿರಾ ಕ್ಯಾಂಟೀನ್‍ ನಲ್ಲಿ ಉಚಿತ ಆಹಾರ ನೀಡಲು ಬಿಬಿಎಂಪಿ ನೋಟಿಸ್ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News