ಕೊರೋನ ವೈರಸ್: ಭಾರತಕ್ಕೆ ಈ ವಾರ ನಿರ್ಣಾಯಕ

Update: 2020-04-01 08:01 GMT

ದೇಶದಲ್ಲಿ ದೃಢಪಟ್ಟ ಕೊರೋನ ಸೋಂಕಿತರ ಸಂಖ್ಯೆ 1000 ತಲುಪಿದೆ. ಕಳೆದ ವಾರ 1,000 ಕೊರೋನ ಸೋಂಕಿತರ ಸಂಖ್ಯೆಯನ್ನು ತಲುಪಿದ 20 ದೇಶಗಳ ಪೈಕಿ ಭಾರತವೂ ಒಂದಾಗಿದ್ದು, 1000ಕ್ಕಿಂತಲೂ ಅಧಿಕ ಪ್ರಕರಣ ಇರುವ 42 ದೇಶಗಳ ಪೈಕಿ ಭಾರತ ಸೇರಿದೆ. ಇದೀಗ ಭಾರತದಲ್ಲಿ ಇನ್ನೆಷ್ಟು ಪ್ರಕರಣಗಳು ದಾಖಲಾಗುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.

ಒಂದು ವಾರದ ಲಾಕ್‍ಡೌನ್ ಈ ಸಾಂಕ್ರಾಮಿಕ ಹರಡುವುದನ್ನು ಹೇಗೆ ತಡೆದಿದೆ?

1000ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾದ ಇತರ ದೇಶಗಳನ್ನು ಗಮನಿಸಿದರೆ ಭಾರತದ ಭವಿಷ್ಯವನ್ನು ಅಂದಾಜಿಸಬಹುದು. ಭಾರತದಲ್ಲಿ ಮಾರ್ಚ್ 23ಕ್ಕೆ ಇದ್ದ ಕೊರೋನ ಪ್ರಕರಣಗಳ ಸಂಖ್ಯೆ 468. ಇದು ಒಂದು ವಾರದಲ್ಲಿ 1,251ಕ್ಕೇರಿದ್ದು, ಎಪ್ರಿಲ್ 6ರ ವೇಳೆಗೆ 2,451ನ್ನು ತಲುಪುವ ನಿರೀಕ್ಷೆ ಇದೆ.

ಈ ದೇಶಗಳು, ಸೋಂಕಿನಿಂದ ಜರ್ಜರಿತವಾಗಿರುವ ಇತರ ದೇಶಗಳ ಅನುಭವದಿಂದ ಪಾಠ ಕಲಿತಿವೆ. ಭಾರತ ಸೇರಿದಂತೆ ಈ ದೇಶಗಳು ಹೆಚ್ಚು ಕ್ಷಿಪ್ರವಾಗಿ ಲಾಕ್‍ ಡೌನ್ ಮತ್ತು ಸಾಮಾಜಿಕ ಅಂತರವನ್ನು ಜಾರಿಗೊಳಿಸಿವೆ. ಇಟಲಿ ಹಾಗೂ ಸ್ಪೇನ್ ಸಾಕಷ್ಟು ಮಂದಿಗೆ ಸೋಂಕು ಹರಡಿದ ಬಳಿಕ ನಿರ್ಬಂಧಗಳನ್ನು ಜಾರಿಗೆ ತಂದಿದ್ದವು. ಅಮೆರಿಕ ಕೂಡಾ ತಡವಾಗಿ ಎಚ್ಚೆತ್ತುಕೊಂಡಿದ್ದಕ್ಕೆ ಇದೀಗ ಬೆಲೆ ತೆರುತ್ತಿದೆ. ಅಮೆರಿಕದಲ್ಲಿ ಒಟ್ಟು ಸಾವಿನ ಸಂಖ್ಯೆ 3017ನ್ನು ತಲುಪಿದ್ದು, ನಿನ್ನೆ ಒಂದೇ ದಿನದಲ್ಲಿ 540 ಮಂದಿ ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1.63 ಲಕ್ಷಕ್ಕೇರಿದೆ.

ಭಾರತದಲ್ಲಿ ಲಾಕ್‍ ಡೌನ್‍ ಅವಧಿಯಲ್ಲಿ 1000ನೇ ಪ್ರಕರಣ ದಾಖಲಾಗಿದೆ. ಮುಂದಿನ ದಿನಗಳಲ್ಲಿ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆ ಸರ್ಕಾರದ ಕ್ರಮ ಎಷ್ಟು ಪರಿಣಾಮಕಾರಿ ಎನ್ನುವುದರ ಸೂಚಕವಾಗಲಿದೆ. ಚೀನಾದ ದರದಲ್ಲಿ ಭಾರತದಲ್ಲೂ ಸಾಂಕ್ರಾಮಿಕ ಹರಡಿದರೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,000 ದಾಟಲಿದೆ. ಜಪಾನ್‍ ನಲ್ಲಿ ಹರಡಿದ ರೀತಿಯಲ್ಲಿ ಭಾರತದಲ್ಲೂ ಹರಡಿದರೆ 1,500ರ ಆಸುಪಾಸಿನಲ್ಲೇ ಇರಲಿದೆ.

ದೇಶದ ಮೊದಲ ಕೊರೋನ ವೈರಸ್ ಪ್ರಕರಣ ಕೇರಳದಲ್ಲಿ ವರದಿಯಾಗಿದ್ದು, ಚೀನಾದ ವೂಹಾನ್‍ನಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಎರಡು ತಿಂಗಳ ಹಿಂದೆ ಸೋಂಕು ಪತ್ತೆಯಾಗಿತ್ತು. ಅರಂಭದಲ್ಲಿ ಇದನ್ನು ಹರಡದಂತೆ ತಡೆಯಲು ಸಫಲವಾದರೂ ಇತ್ತೀಚಿನ ದಿನಗಳಲ್ಲಿ ದಿಢೀರನೇ ಸಂಖ್ಯೆ ಹೆಚ್ಚುತ್ತಿದೆ. ಏಪ್ರಿಲ್ 6ರ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ತಮಿಳುನಾಡಿನಲ್ಲೂ ಗಣನೀಯ ಪ್ರಮಾಣದಲ್ಲಿ ಸಂಖ್ಯೆ ಹೆಚ್ಚುತ್ತಿದ್ದು, ಸದ್ಯದ ದರದಲ್ಲಿ ಮುಂದುವರಿದರೆ, ಒಟ್ಟು ಸೋಂಕಿತರ ಸಂಖ್ಯೆ ಐದು ಪಟ್ಟು ಹೆಚ್ಚಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News