ಲಾಕ್ ಡೌನ್ ನಡುವೆ ಸೇವೆ: ಪೌರ ಕಾರ್ಮಿಕರಿಗೆ ಹೂಗಳನ್ನೆಸೆದು, ನೋಟಿನ ಹಾರ ಹಾಕಿದರು

Update: 2020-04-01 09:13 GMT

ಅಮೃತಸರ್: ಪಂಜಾಬ್ ರಾಜ್ಯದ ಪಟಿಯಾಲ ಜಿಲ್ಲೆಯ ನಾಭ ಎಂಬಲ್ಲಿ ಮಂಗಳವಾರ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಲು ಆಗಮಿಸಿದ್ದ ಮಹಾನಗರ ಪಾಲಿಕೆ ಕಾರ್ಮಿಕರಿಗೆ ಅಚ್ಚರಿ ಕಾದಿತ್ತು. ಸ್ಥಳೀಯ ಜನರು ಅವರಿಗೆ ತಮ್ಮ ಮನೆಯ ಮಹಡಿಗಳಿಂದ ಹೂವಿನ ಎಸಳುಗಳನ್ನೆಸೆದು ಅವರಿಗೆ ಧನ್ಯವಾದ ಸೂಚಿಸಿದರೆ ಇನ್ನು ಕೆಲವರು ನೋಟಿನ ಹಾರಗಳನ್ನು ಅವರಿಗೆ  ಹಾಕಿ ಗೌರವ ಸೂಚಿಸಿದರು.

ಎಲ್ಲೆಡೆ ಕೊರೋನ ಭೀತಿ ಇರುವ ಇಂತಹ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವ ಈ ಕಾರ್ಮಿಕರಿಗೆ ಮೆಚ್ಚುಗೆ ಸೂಚಿಸಲು ಸ್ಥಳೀಯರು  ಇಂತಹ ಒಂದು ಕ್ರಮ ಕೈಗೊಂಡಿದ್ದರು.

ಮಾಸ್ಕ್ ಧರಿಸಿದ್ದ ಸ್ಥಳೀಯ ನಿವಾಸಿಗಳು ಕಾರ್ಮಿಕರನ್ನು ನೋಟಿನ ಹಾರಗಳು ಹಾಗೂ ಹೂವಿನ ಎಸಳುಗಳಿಂದ ಗೌರವಿಸುತ್ತಿರುವ ವೀಡಿಯೋವನ್ನು ಸುದ್ದಿ ಸಂಸ್ಥೆಯೊಂದು ಟ್ವೀಟ್ ಮಾಡಿದೆ.

ರಾಜ್ಯದಲ್ಲಿ ಇಲ್ಲಿಯ ತನಕ 41 ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News