ಹಣ್ಣು-ತರಕಾರಿಗಳ ಸಾಗಾಣಿಕೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಿ: ಸಿಎಂ ಯಡಿಯೂರಪ್ಪ ಸೂಚನೆ

Update: 2020-04-01 16:58 GMT

ಬೆಂಗಳೂರು, ಎ.1: ಟೊಮ್ಯಾಟೋ, ಕಲ್ಲಂಗಡಿ, ಕರಬೂಜ, ದಾಕ್ಷಿ, ನಿಂಬೆಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದ ಪೊಲೀಸರಿಗೆ ಇಂದಿಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ ಕಲ್ಲಂಗಡಿ ಸಾಗಾಣಿಕೆ ಮಾಡಲಾಗದೆ ಕಲಬುರಗಿಯಲ್ಲಿ ರೈತನೋರ್ವ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಬಿ.ಸಿ.ಪಾಟೀಲ್, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ನಾರಾಯಣಗೌಡ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೈತರ ಕೃಷಿ ಉತ್ಪನ್ನಗಳ ಪೂರೈಕೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟೊಮ್ಯಾಟೋ, ಕಲ್ಲಂಗಡಿ, ಕರಬೂಜ, ದಾಕ್ಷಿ, ನಿಂಬೆ ಸೇರಿ ಹಣ್ಣು, ತರಕಾರಿಗಳು ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೆ ರಫ್ತಾಗುತ್ತಿತ್ತು. ಇದೀಗ ಕೊರೋನ ಸೋಂಕು ಭೀತಿ ಹಿನ್ನೆಲೆಯಲ್ಲಿ ಬೇಡಿಕೆ ಕುಸಿದಿದೆ. ಹೀಗಾಗಿ ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ಕಾರಣಕ್ಕೂ ಪೊಲೀಸರು ಅಡ್ಡಿಪಡಿಸಬಾರದು ಎಂದು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಟೊಮ್ಯಾಟೋ ಸಂಸ್ಕರಣಾ ಘಟಕಗಳ ಮೂಲಕ ಕೆಚಪ್ ತಯಾರಿಕೆ ಮಾಡಲು ಸೂಚಿಸಲಾಗಿದೆ. ಅಲ್ಲದೆ, ಹಾಪ್ ಕಾಮ್ಸ್ ಮೂಲಕ ಹಣ್ಣು-ತರಕಾರಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ವಾಹನಗಳ ಮೂಲಕ ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದ ಅವರು, ಇದರಿಂದ ಗ್ರಾಹಕರಿಗೆ ಸೂಕ್ತ ದರದಲ್ಲಿ ಹಣ್ಣು ಮತ್ತು ತರಕಾರಿಗಳು ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹಾಪ್ ಕಾಮ್ಸ್ ಮೂಲಕ ಮೊಟ್ಟೆ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ. ಹಣ್ಣು ಮತ್ತು ತರಕಾರಿ ಸೇರಿದಂತೆ ದಿನಸಿ ವಸ್ತುಗಳ ಅಂಗಡಿಗಳು ದಿನವಿಡಿ ತೆರೆದಿರಲಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾರಕ ಕೊರೋನ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಲು ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.

ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹಣ್ಣು-ತರಕಾರಿ ವಸ್ತುಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗುವುದು. ಅಲ್ಲದೆ, ವೈನರಿಗಳಲ್ಲಿ ಉತ್ಪಾದನೆ ಮುಂದುವರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ಮಾರುಕಟ್ಟೆಗಳಲ್ಲಿ ದಾಸ್ತಾನು ಕೊರತೆ ಇಲ್ಲ. ಆದುದರಿಂದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ ವಂದತಿಗಳಿಗೆ ಕಿವಿಗೂಡಬಾರದು ಎಂದು ಯಡಿಯೂರಪ್ಪ ಇದೇ ವೇಳೆ ಕೋರಿದರು.

ಅಡುಗೆ ಎಣ್ಣೆ ದಾಸ್ತಾನು ಲಭ್ಯವಿದ್ದು, ಪ್ಯಾಕೇಜಿಂಗ್ ವ್ಯವಸ್ಥೆ ಮಾಡಿ ಪೂರೈಕೆ ಮಾಡಲು ಸೂಚಿಸಲಾಗಿದೆ. ಅಕ್ಕಿ ಮೀಲ್‍ಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಬೆಳೆ ಕಟಾವಿಗೆ ನೆರೆ ರಾಜ್ಯಗಳಿಂದ ಕಟಾವು ಯಂತ್ರಗಳನ್ನು ತರಿಸಿ ಕಟಾವಿಗೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ತಿಂಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಬಿತ್ತನೆಯಾಗಲಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

ರಾಜ್ಯದ 27 ರೇಶ್ಮೆ ಮಾರುಕಟ್ಟೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಇನ್ನು 14 ಮಾರುಕಟ್ಟೆಗಳಲ್ಲಿ ತಂಡ ರಚಿಸಿ, ರೀಲರ್ ಮತ್ತು ರೈತರೊಂದಿಗೆ ನೇರವಾಗಿ ಸಂಪರ್ಕ ಕಲ್ಪಸುವಂತೆ ಸೂಚನೆ ನೀಡಲಾಗಿದೆ. ಆದರೆ, ಏಜೆಂಟರನ್ನು ಮನೆಗೆ ಕಳುಹಿಸಿ ಕಡಿಮೆ ದರಕ್ಕೆ ರೇಶ್ಮೆ ಗೂಡು ಖರೀದಿ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಸೂಕ್ತ ಮುನ್ನಚ್ಚರಿಕೆಯೊಂದಿಗೆ ರೇಶ್ಮೆ ಮಾರುಕಟ್ಟೆ ತೆರೆಯಲು ಸೂಚಿಸಲಾಗಿದೆ ಎಂದರು.

ಉಚಿತ ಹಾಲು ವಿತರಣೆ: ಕೆಎಂಎಫ್ ಮೂಲಕ 69 ಲಕ್ಷ ಲೀಟರ್ ಹಾಲು ಖರೀದಿಯಾಗುತ್ತಿದ್ದು, 42 ಲಕ್ಷ ಲೀಟರ್ ಹಾಲು  ಮಾರಾಟ ಮಾಡಲಾಗುತ್ತಿದೆ. ಉಳಿದ 7.5 ಲಕ್ಷ ಲೀಟರ್ ಹಾಲನ್ನು ಸರಕಾರವೇ ಅಧಿಸೂಚಿಸಿರುವ ಕೊಳಗೇರಿಗಳು ಮತ್ತು ಕಾರ್ಮಿಕರು ವಾಸಿಸುವ ಬಡಾವಣೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ವಿವರಣೆ ನೀಡಿದರು.

ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತಿದೆ. ವ್ಯಾಪಾರಿಗಳು ಸಂಕಷ್ಟದ ಅವಧಿಯನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಇಂತಹ ಅಕ್ರಮಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂಡು ಯಡಿಯೂರಪ್ಪ ಇದೇ ಸಂದರ್ಭದಲ್ಲಿ, ವ್ಯಾಪಾರಿಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದರು.

ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಕರೆ ನೀಡಿರುವ ಲಾಕ್‍ಡೌನ್‍ನಿಂದ ನಗರದಲ್ಲಿ ಸಿಲುಕಿರುವ ಕಟ್ಟಡ ನಿರ್ಮಾಣ ಕಾರ್ಮಿಕರುಗಳಿಗೆ ಬಿಲ್ಡರುಗಳೇ ಸೂಕ್ತ ಊಟ-ವಸತಿ ಸೌಲಭ್ಯವನ್ನು ಕಲ್ಪಿಸಲು ಸೂಚನೆ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಹಣ್ಣು-ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಅವರ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು

-ಯಡಿಯೂರಪ್ಪ, ಮುಖ್ಯಮಂತ್ರಿ

ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ರಸ್ತೆಗೆ ಚಲ್ಲುವುದು, ನಾಶ ಮಾಡುವುದಾಗಲಿ ಮಾಡಬಾರದು. ಕೊರೋನ ಸೋಂಕು ಜಗತ್ತಿಗೆ ಎದುರಾಗಿರುವ ಸಮಸ್ಯೆ. ಇದನ್ನು ಯಾರೂ ನಿರೀಕ್ಷೆ ಮಾಡರಲಿಲ್ಲ. ಹೀಗಾಗಿ ರೈತರು ಆತಂಕಕ್ಕೆ ಒಳಗಾಗದೇ ಸ್ವಲ್ಪ ತಾಳ್ಮೆ ವಹಿಸಬೇಕು. ಕೃಷಿ ಉತ್ಪನ್ನಗಳ ಖರೀದಿಗೆ ಕ್ರಮ ವಹಿಸಲಿದೆ.

-ಬಿ.ಸಿ.ಪಾಟೀಲ್, ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News