ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ವತಿಯಿಂದ ಬಡ ಕುಟುಂಬಗಳಿಗೆ ದಿನಸಿ ವಿತರಣೆ

Update: 2020-04-01 18:44 GMT

ಬೆಂಗಳೂರು, ಎ.1: ಕೊರೋನ ವೈರಸ್(ಕೋವಿಡ್-19) ಹರಡದಂತೆ ತಡೆಗಟ್ಟಲು ಪ್ರಧಾನಮಂತ್ರಿ ಕರೆ ನೀಡಿರುವ 21 ದಿನಗಳ ಲಾಕ್‍ಡೌನ್‍ನಿಂದಾಗಿ ರಾಮಮೂರ್ತಿ ನಗರ ವಾರ್ಡ್‍ನಲ್ಲಿ ಸಮಸ್ಯೆಗೆ ಸಿಲುಕಿರುವ ಬಡ ಕುಟುಂಬಗಳಿಗೆ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ನೆರವಿನ ಹಸ್ತ ಚಾಚಲಾಗಿದೆ.

ದಿನಗೂಲಿ ನೌಕರರು, ಬಡವರು, ನಿರ್ಗತಿಕರಿಗೆ ತಮ್ಮ ಫೌಂಡೇಶನ್ ವತಿಯಿಂದ 20 ಲಕ್ಷರೂ. ವೆಚ್ಚದಲ್ಲಿ ದಿನಸಿ ಪದಾರ್ಥಗಳನ್ನು ಪೂರೈಸಲಾಗುತ್ತಿದ್ದು, ಇದರಿಂದ ಸುಮಾರು ಎರಡು ಸಾವಿರ ಕುಟುಂಬಗಳಿಗೆ ಸಹಾಯವಾಗಲಿದೆ ಎಂದು ಶಾಂತಾ ಕೃಷ್ಣಮೂರ್ತಿ ಹೇಳಿದರು.

ಬುಧವಾರ ಇಲ್ಲಿನ ಎನ್‍ಆರ್‍ಐ ಲೇಔಟ್‍ನಲ್ಲಿರುವ ತಮ್ಮ ಕಚೇರಿಯಲ್ಲಿ ಬಡ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ವಿತರಿಸಿದ ಬಳಿಕ ಮಾತನಾಡಿದ ಅವರು, ನಮ್ಮ ವಾರ್ಡ್‍ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಿನಗೂಲಿ ನೌಕರರು, ಬಡವರು ಹಾಗೂ ವಲಸಿಗ ಕಾರ್ಮಿಕರಿದ್ದಾರೆ. ಲಾಕ್‍ಡೌನ್‍ನಿಂದಾಗಿ ಅವರು ತಮ್ಮ ದಿನನಿತ್ಯದ ಜೀವನ ಸಾಗಿಸಲು ಕಷ್ಟವಾಗುತ್ತಿದೆ ಎಂದರು.

ಆದುದರಿಂದ, ಪ್ರತಿಯೊಂದು ಕುಟುಂಬಕ್ಕೂ 5 ಕೆಜಿ ಅಕ್ಕಿ, ಎರಡು ಕೆಜಿ ಬೇಳೆ, ಒಂದು ಕೆಜಿ ಉಪ್ಪು, ಒಂದು ಲೀಟರ್ ಅಡುಗೆ ಎಣ್ಣೆ, ಎರಡು ಕೆಜಿ ಸಕ್ಕರೆ, ಎರಡು ಕೆಜಿ ಗೋಧಿ ಹಿಟ್ಟು ಒಳಗೊಂಡ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಜನಸಂದಣಿ ಹೆಚ್ಚಾಗಬಾರದೆಂದು ನಮ್ಮ ಸ್ವಯಂಸೇವಕರ ಮೂಲಕ ಬಡವರ ಮನೆ ಬಾಗಿಲಿಗೆ ಆಹಾರ ಪದಾರ್ಥಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಶಾಂತಾ ಕೃಷ್ಣಮೂರ್ತಿ ಫೌಂಡೇಶನ್‍ನ ಸಂಸ್ಥಾಪಕ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಮಾತನಾಡಿ, ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಜೊತೆಗೆ, ಬಡವರು ಹಸಿವಿನಿಂದ ನರಳದಂತೆಯೂ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದು. ನಮ್ಮ ಸಂಸ್ಥೆ ವತಿಯಿಂದ ಕೈಲಾಗುವಷ್ಟು ನೆರವು ನೀಡುತ್ತಿದ್ದೇವೆ. ಅದೇ ರೀತಿ ಬೇರೆಯವರು ಸಹ ತಮ್ಮ ಕೈಲಾದಷ್ಟು ನೆರವನ್ನು ಬಡವರಿಗೆ ನೀಡಬೇಕು ಎಂದು ಮನವಿ ಮಾಡಿದರು.

ರಾಮಮೂರ್ತಿ ನಗರ ವಾರ್ಡ್‍ನಲ್ಲಿ ಈ ಎರಡು ಸಾವಿರ ದಿನಸಿ ಪದಾರ್ಥಗಳ ಕಿಟ್ ಜೊತೆಗೆ 25 ಸಾವಿರ ಮಾಸ್ಕ್, 5 ಸಾವಿರ ಬಾಟಲ್ ಸ್ಯಾನಿಟೈಸರ್ ಗಳನ್ನು ಪ್ರತಿಯೊಂದು ಮನೆಗೂ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News