ಸರ್ವೇಗೆ ತೆರಳಿದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ: ಆರೋಪ

Update: 2020-04-02 11:42 GMT

ಬೆಂಗಳೂರು. ಎ.2: ಕೊರೋನ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ವಿಚಾರಿಸಿ, ಮಾಹಿತಿ ನಮೂದಿಸಿಕೊಳ್ಳುತ್ತಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಸಾರಾಯಿಪಾಳ್ಯ ಸಮೀಪದ ಸಾದಿಕ್ ನಗರದಲ್ಲಿ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹೆಗಡೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಆರೋಗ್ಯ ಮಾಹಿತಿ ಸಂಗ್ರಹಿಸಲು ಸಾದಿಕ್ ನಗರ ವ್ಯಾಪ್ತಿಯಲ್ಲಿ 6 ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.

ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ ಕೃಷ್ಣವೇಣಿ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ, ಇತರರ ಆರೋಗ್ಯ ಕಾಪಾಡಲು ತಮ್ಮ ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸುವವರ ವಿರುದ್ಧ ಮಸೀದಿಯಿಂದ ಪ್ರಚೋದನಕಾರಿ ಘೋಷಣೆ ಹೊರಬಿದ್ದ ಬಳಿಕ ಆರೋಗ್ಯ ಕಾರ್ಯಕರ್ತೆ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿದರು.

ಅವರ ಬಳಿ ಇದ್ದ ಕಾಗದ ಪತ್ರ, ಮೊಬೈಲ್ ಕಸಿದು ಬೆದರಿಕೆ ಒಡ್ಡಲಾಗಿದೆ. ಜಾತಿ, ಮತ, ಧರ್ಮದ ಭೇದ ಮಾಡದೆ ಸೇವೆ ಸಲ್ಲಿಸುವ ಸರಕಾರಿ ನೌಕರರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ. ಇದು ಖಂಡನೀಯ. ಪ್ರಚೋದನಕಾರಿ ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಅಲ್ಲದೆ, ತಮ್ಮ ಮೇಲೆ ನಡೆದ ಹಲ್ಲೆ ಕುರಿತು ಕೃಷ್ಣವೇಣಿ ನೀಡಿದ ದೂರು ಸ್ವೀಕರಿಸದ ಪೊಲೀಸರ ವಿರುದ್ಧವು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಸೂಚಿಸಿದ ಅಶ್ವಥ್ ನಾರಾಯಣ, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ.ಶರಣಪ್ಪ ಅವರಿಗೆ ನಿರ್ದೇಶನ ನೀಡಿದರು. ಘಟನೆ ಕುರಿತು ಪೂರ್ಣ ಮಾಹಿತಿ ಪಡೆದು ಅಗತ್ಯ ನೆರವು ಒದಗಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೂ ಸೂಚಿಸಿದರು.

ಕೃಷ್ಣವೇಣಿ ಆರೋಪವೇನು?: ನೂರಾರು ಜನರ ಗುಂಪು ನಮ್ಮನ್ನು ಹಿಡಿದುಕೊಂಡು ಗಲಾಟೆ ಮಾಡಿದರು. ಎಲ್ಲರೂ ನಮ್ಮನ್ನು ಬೈಯುತ್ತಿದ್ದರು. ಯಾರು ನಿಮ್ಮನ್ನು ಇಲ್ಲಿಗೆ ಬರಲು ಹೇಳಿದ್ದು, ನಿಮಗೇನು ಕೆಲಸ. ಮೊದಲು ಇಲ್ಲಿಂದ ನಿಮ್ಮ ಮನೆಗೆ ಹೋಗಿ ಎಂದು ಹೇಳಿ. ನಮ್ಮ ಬಳಿ ಇದ್ದ ಬ್ಯಾಗ್, ಮೊಬೈಲ್ ಕಿತ್ತುಕೊಂಡರು ಎಂದು ಆಶಾ ಕಾರ್ಯಕರ್ತೆ ಕೃಷ್ಣವೇಣಿ ಆರೋಪಿಸಿದರು.

ಕಳೆದ ಐದು ವರ್ಷದಿಂದ ನಾವು ಕೆಲಸ ಮಾಡುತ್ತಿದ್ದೇವೆ. ಈವರೆಗೆ ಯಾರ ಬಳಿಯೂ ಕಷ್ಟ ಹೇಳಿಕೊಂಡಿರಲಿಲ್ಲ. ಆದರೆ, ಈಗ ಮನೆ ಮನೆಗೆ ಹೋದರೆ ಬೈಯ್ದು ಕಳುಹಿಸುತ್ತಿದ್ದಾರೆ. ಸೋಂಕಿನ ಲಕ್ಷಣ ಇದೆಯೋ ಇಲ್ಲವೋ ಎಂಬುದನ್ನು ಹೇಳುವುದಿಲ್ಲ. ಅವರ ಆರೋಗ್ಯಕ್ಕಾಗಿ ನಾವು ಹೋಗುತ್ತಿದ್ದೇವೆ ಎಂದು ಅವರು ತಿಳಿಸಿದರು.

ನೂರು ಜನ ನಮ್ಮನ್ನು ಸುತ್ತುವರಿದು ಯಾರನ್ನು ಕರೆಯುತ್ತಿರೋ ಕರೆಯಿರಿ ಎಂದು ಬೆದರಿಕೆ ಹಾಕಿದರು. ಆನಂತರ ನಾವು ನಮ್ಮ ವೈದ್ಯರನ್ನು ಸಂಪರ್ಕಿಸಿದೆವು, ಅವರು ಬಂದು ತಿಳಿಸಿ, ಹೊಯ್ಸಳವನ್ನು ಕರೆಸಿದರು. ನಾವು ಸಮೀಕ್ಷೆ ಮಾಡುತ್ತಿದ್ದ ಪಕ್ಕದ ಬೀದಿಯಲ್ಲಿಯೂ ನರ್ಸ್‍ಗಳ ಮೇಲೆ ದೌರ್ಜನ್ಯ ನಡೆಸಲಾಗಿದೆ. ಮಸೀದಿಯಲ್ಲಿ ಯಾರು ಘೋಷಣೆ ಮಾಡಿದರೋ ಅವರನ್ನು ಮೊದಲು ಬಂಧಿಸಬೇಕು ಎಂದು ಕೃಷ್ಣವೇಣಿ ಆಗ್ರಹಿಸಿದರು.

ಕಾನೂನು ರೀತಿ ಕ್ರಮ

ಇಲ್ಲಿ ಜಾತಿ, ಮತ, ಧರ್ಮ ಮುಖ್ಯವಲ್ಲ. ನಿಮ್ಮ ವೈಯಕ್ತಿಕ ಹಿತಾಸಕ್ತಿ ಮುಖ್ಯವಲ್ಲ. ಕೋಟ್ಯಂತರ ಕನ್ನಡಿಗರ, ಭಾರತೀಯರ ಆರೋಗ್ಯ ಮುಖ್ಯ. ಬೆಂಗಳೂರಿನ ಸಾದಿಕ್ ಪಾಳ್ಯದಲ್ಲಿ ಕೆಲವು ಕಿಡಿಗೇಡಿಗಳು ಸೇರಿ ನರ್ಸ್ ಮೇಲೆ ಹಲ್ಲೆ ಮಾಡಿದ್ದು ಅತ್ಯಂತ ಹೇಯ ಕೃತ್ಯ. ಯಾರೇ ಆಗಲಿ, ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಮನೆ ಬಾಗಿಲಿಗೆ ಬಂದು ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುವ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತರು ಹಾಗೂ ಈ ಸಂಕಷ್ಟದ ಸಮಯದಲ್ಲಿ ಹಗಲಿರುಳು ದುಡಿಯುತ್ತಿರುವರು ದೇವರ ಸಮಾನ. ಅವರನ್ನು ಗೌರವದಿಂದ ನೋಡಿ. ಅವರ ಮೇಲೆ ಹಲ್ಲೆ ನಡೆದರೆ ನೋಡಿಕೊಂಡು ಸುಮ್ಮನೆ ಕೂರಲಾಗುವುದಿಲ್ಲ. ಎಚ್ಚರವಿರಲಿ ಎಂದು ಶ್ರೀರಾಮುಲು ಟ್ವಿಟ್ ಮಾಡಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ

ಆರೋಗ್ಯ ಸಮೀಕ್ಷೆಗೂ ಎನ್‍ಆರ್ ಸಿಗೂ ಹೋಲಿಕೆ ಮಾಡಿ ಕಿಡಿಗೇಡಿಗಳು ಹಬ್ಬಿಸಿದ ಸುಳ್ಳು ಸುದ್ದಿಯಿಂದಾಗಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯಾಗಿದೆ. ಎನ್‍ಆರ್ ಸಿಗಾಗಿ ಮಾಹಿತಿ ಕಲೆಹಾಕಲು ಆಕೆ ಬಂದಿದ್ದು, ಯಾರೊಬ್ಬರೂ ಮಾಹಿತಿ ಕೊಡಬೇಡಿ ಎಂದು ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹಬ್ಬಿಸಿದ್ದಾರೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದರು.

ಸಾದಿಕ್ ನಗರದಲ್ಲಿ ಘಟನೆ ಕುರಿತು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆ ಕೃಷ್ಣವೇಣಿ ಅವರಿಂದ ದೂರು ಸ್ವೀಕರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಸ್ಥಳದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗುವುದು. ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ಪತ್ತೆಗೆ ತನಿಖೆ ಆರಂಭಿಸಲಾಗಿದೆ ಎಂದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳಿಗೆ ಸಹಕಾರ ನೀಡದೆ, ಅವರ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಈ ಇಲಾಖೆಗಳೆಲ್ಲ ತಮ್ಮ ಜೀವದ ಹಂಗುತೊರೆದು ಹಗಲಿರುಳು ಕೆಲಸ ಮಾಡುತ್ತಿರುವುದು ಜನರ ಆರೋಗ್ಯ ರಕ್ಷಣೆಗೆ, ಇದನ್ನು ಪ್ರತಿಯೊಬ್ಬರೂ ಅರಿಯಬೇಕು. ತಮ್ಮ ಆರೋಗ್ಯದ ಮಾಹಿತಿ ಕೇಳಿ ಬರುವ ಸರಕಾರಿ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ನೀಡಿ, ಆರೋಗ್ಯ ಸಮಸ್ಯೆ ಇದ್ದವರು ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿದ್ದಾರೆ.

ದೇಶವೆ ಕೊರೋನ ವಿರುದ್ಧ ಒಂದಾಗಿ ಹೋರಾಡುತ್ತಿರುವಾಗ ಉದ್ದಟತನದ ಪ್ರದರ್ಶಣ ಬೇಡ, ಸಹಕಾರ ಮತ್ತು ಸಂಯಮವೆ ಕೊರೋನ ತಡೆಗಟ್ಟಲು ಇರುವ ಏಕೈಕ ದಾರಿ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News