ನಿಲ್ಲದ ಕೊರೋನ ಅಟ್ಟಹಾಸ: ವಿಶ್ವದಾದ್ಯಂತ ಒಟ್ಟು 10 ಲಕ್ಷ ಸೋಂಕಿತರು, 53 ಸಾವಿರ ಮಂದಿ ಬಲಿ !

Update: 2020-04-03 04:08 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.3: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೋನ ವೈರಸ್ ಸೋಂಕು 10 ಲಕ್ಷ ಮಂದಿಗೆ ತಗುಲಿದೆ. ಕೇವಲ 93 ದಿನಗಳಲ್ಲಿ ಈ ಸಂಖ್ಯೆಯನ್ನು ತಲುಪಿದೆ ಎಂದು ವಿಶ್ವದ ವಿವಿಧೆಡೆಯಿಂದ ಪಡೆದ ಅಂಕಿ ಅಂಶಗಳನ್ನು ಕ್ರೋಢೀಕರಿಸಿ ಎಎಫ್‍ಪಿ ವರದಿ ಮಾಡಿದೆ. 2019ರ ಡಿಸೆಂಬರ್ 31ರ ಮಧ್ಯರಾತ್ರಿ ವಿಶ್ವದಲ್ಲಿ ಕೇವಲ 280 ಪ್ರಕರಣಗಳಿದ್ದವು.

ಹೊಸ ವರ್ಷದ 93 ದಿನಗಳಲ್ಲಿ 10 ಲಕ್ಷ ಮಂದಿಗೆ ಸೋಂಕು ತಗುಲಿದ್ದಲ್ಲದೇ 53 ಸಾವಿರ ಜೀವಗಳನ್ನು ಈ ಮಾರಕ ಸೋಂಕು ಬಲಿ ಪಡೆದಿದೆ. 203 ದೇಶಗಳ ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿದ್ದು ಇಡೀ ಮನುಕುಲಕ್ಕೆ ವ್ಯಾಪಕ ಆರ್ಥಿಕ, ಸಾಮಾಜಿಕ ಹಾಗೂ ಮಾನಸಿಕ ಹಾನಿ ಉಂಟು ಮಾಡಿದೆ. ಇದುವರೆಗೆ ಸೋಂಕಿತರ ಪೈಕಿ 2 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಭಾರತದಲ್ಲಿ ಮೊದಲ ಬಾರಿಗೆ ಗುರುವಾರ ಒಂದೇ ದಿನ 500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಸೋಂಕು ಹರಡುವುದು ತಡೆಯಲು ದೇಶದಲ್ಲಿ ಮೂರು ವಾರಗಳ ಲಾಕ್‍ಡೌನ್ ಜಾರಿಯಲ್ಲಿದ್ದರೂ, 19 ಮಂದಿ ಒಂದೇ ದಿನ ಈ ಮಾರಕ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 72ಕ್ಕೇರಿದೆ. 

ಅಮೆರಿಕದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ನ್ಯೂಯಾರ್ಕ್ ಪಟ್ಟಣವೊಂದರಲ್ಲೇ 2,200 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ 5,000ಕ್ಕೂ ಹೆಚ್ಚು ಮಂದಿ ವೈರಸ್‍ಗೆ ಬಲಿಯಾಗಿದ್ದಾರೆ. ಅಮೆರಿಕ ಇನ್ನಷ್ಟು ಕಠಿಣ ಪರಿಸ್ಥಿತಿ ಎದುರಿಸಬೇಕಾದ ಅಪಾಯವಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 2.4 ಲಕ್ಷವನ್ನೂ ತಲುಪಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಇಟಲಿಯಲ್ಲಿ 13 ಸಾವಿರ ಮಂದಿ ಮೃತಪಟ್ಟಿದ್ದರೆ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಒಟ್ಟು 20 ಸಾವಿರ ಮಂದಿ ಬಲಿಯಾಗಿದ್ದಾರೆ. ಮೊದಲು ವೈರಸ್ ಕಾಣಿಸಿಕೊಂಡ ಚೀನಾದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 3,300. ದೇಶದಲ್ಲಿ ಎರಡು ತಿಂಗಳ ಲಾಕ್‍ಡೌನ್ ಬಳಿಕ ಪ್ರತಿದಿನ ಸೋಂಕು ತಗುಲುವವರ ಸಂಖ್ಯೆ ಒಂದಂಕಿಗೆ ಇಳಿದಿದೆ.

ವಿಶ್ವಾದ್ಯಂತ ಷೇರು ಮಾರುಕಟ್ಟೆ ಕುಸಿದ್ದು, ಭಾರತದ ಮುಂಬೈ ಷೇರು ವಿನಿಮಯ ಕೇಂದ್ರವೊಂದರಲ್ಲೇ ಮಾರ್ಚ್ ತಿಂಗಳಲ್ಲಿ ಹೂಡಿಕೆದಾರರು 33.38 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News