ಬೆಂಗಳೂರು: ಜಿಲ್ಲಾಡಳಿತದಿಂದ ವಲಸೆ ಕಾರ್ಮಿಕರಿಗೆ ಆಹಾರ, ದಿನಸಿ ಸಾಮಾಗ್ರಿ ವಿತರಣೆ

Update: 2020-04-03 06:12 GMT

ಬೆಂಗಳೂರು, ಎ.3- ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಲಾಕ್​ಡೌನ್ ಮಾಡಲಾಗಿದ್ದು, ಈ ವೇಳೆ ತೊಂದರೆಗೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ದಿನಸಿ ಸಾಮಾಗ್ರಿಗಳನ್ನು ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ವತಿಯಿಂದ ವಿತರಣೆ ಮಾಡಲಾಯಿತು.

ನಗರದಲ್ಲಿಂದು ಬೆಂಗಳೂರು ದಕ್ಷಿಣ ಉಪವಿಭಾಗಧೀಕಾರಿ ಡಾ.ಶಿವಣ್ಣ ನೇತೃತ್ವದಲ್ಲಿ 250ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರ ಮತ್ತು ಸಾಮಾಗ್ರಿಗಳನ್ನು ವಿತರಣೆ ಮಾಡಿ, ಸೋಂಕು ಹರಡದಂತೆ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಡಾ.ಶಿವಣ್ಣ, ಅಸಂಘಟಿತ ಮತ್ತು ವಲಸೆ ಕಾರ್ಮಿಕರಿಗೆ ಊಟ ಜತೆಗೆ ವಸತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಂತಹ ಸಮಸ್ಯೆ ಕಂಡುಬಂದಲ್ಲಿ ಜಿಲ್ಲಾಡಳಿತದ ಸಹಾಯವಾಣಿಗೆ ಸಂಪರ್ಕಿಸಿ ಮಾಹಿತಿ ನೀಡಿದಲ್ಲಿಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಬೆಂಗಳೂರು ದಕ್ಷಿಣ ವಿಭಾಗ ತಾಲೂಕುಗಳಲ್ಲಿ ಅವಶ್ಯಕತೆ ಇರುವವರಿಗೆ ಆಹಾರ ವಿತರಣೆ ಕಾರ್ಯ ನಡೆಯುತ್ತಿದೆ. ಪ್ರತಿನಿತ್ಯ ಕಾಲೋನಿಗಳಲ್ಲಿ ಇರುವವರಿಗೆ, ಬಡವರಿಗೆ, ವಲಸೆ ಕಾರ್ಮಿಕರಿಗೆ ಹೀಗೆ ಅವಶ್ಯಕತೆ ಇರುವವರಿಗೆಲ್ಲಾ ಆಹಾರವನ್ನ ನೀಡಲಾಗುತ್ತಿದೆ. ಜಿಲ್ಲಾ ಆರೋಗ್ಯ ಕೇಂದ್ರ, ಎನ್​ಜಿಒ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸರ ಸಹಕಾರದೊಂದಿಗೆ ಇಂದಿರಾ ಕ್ಯಾಂಟೀನ್​ನ ಊಟ ಮತ್ತು ಹಾಲು ಸಹ ವಿತರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

24 ಗಂಟೆಗಳ ಕಾಲವೂ ಆಹಾರ ವಿತರಿಸಲಾಗುತ್ತಿದ್ದು, ಹೆಲ್ಪ್​ಲೈನ್​ನಿಂದ ಕರೆ ಬಂದರೆ ಅಲ್ಲಿಗೂ ಸಹ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ. ಇದಲ್ಲದೆ, ರಾತ್ರಿ ವೇಳೆ ಗಡಿ ಭಾಗದಲ್ಲಿ ಚೆಕ್ ಪೋಸ್ಟ್​​ಗಳನ್ನ ಮಾಡಿಕೊಂಡಿದ್ದು, ಅಲ್ಲಿ ಸಂಚರಿಸುವವರ ಮೇಲೆ ನಿಗಾ ಇಡಲಾಗಿದೆ. ಜೊತೆಗೆ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಲಾಗುತ್ತಿದೆ ಎಂದು ಶಿವಣ್ಣ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News