ಲಾಕ್ ಡೌನ್ ನಡುವೆ ರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ

Update: 2020-04-04 11:52 GMT

ಬೆಂಗಳೂರು, ಎ.4: ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಐಷಾರಾಮಿ ಕಾರಿನಲ್ಲಿ ರೈಡ್ ಮಾಡಲು ತೆರಳಿದಾಗ ಸಂಭವಿಸಿದ ಅಪಘಾತದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಮತ್ತು ಆಕೆಯ ಸ್ನೇಹಿತ ಗಾಯಗೊಂಡಿರುವ ಘಟನೆ ನಗರದ ಹೈಗ್ರೌಂಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಟಿ ಶರ್ಮಿಳಾ ಮಾಂಡ್ರೆ ಕಾರು ಶನಿವಾರ ಮುಂಜಾನೆ ವಸಂತ ನಗರದ ಅಂಡರ್ ಪಾಸ್‍ನ ಪಿಲ್ಲರ್ ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಆದರೆ ಇವರು ಪೊಲೀಸ್ ಇಲಾಖೆಯಿಂದ ಯಾವುದೇ ಪಾಸ್ ಪಡೆದಿರಲಿಲ್ಲ ಎನ್ನಲಾಗಿದೆ. 

ಐಷಾರಾಮಿ ಕಾರಿನಲ್ಲಿ ಶರ್ಮಿಳಾ ಹೊರಗಡೆ ಬಂದಿದ್ದ ವೇಳೆ ಕಾರಿನಲ್ಲಿ ಆಕೆಯ ಜತೆ ಇಬ್ಬರು ಸ್ನೇಹಿತರೂ ಇದ್ದರು. ವಸಂತನಗರದ ಕೆಳ ಸೇತುವೆಯಲ್ಲಿನ ಪಿಲ್ಲರ್ ಗೆ ಕಾರ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಿಂದ ಶರ್ಮಿಳಾ ಮಾಂಡ್ರೆ ಮುಖಕ್ಕೆ ಗಾಯಗಳಾಗಿವೆ. ಅಲ್ಲದೇ ಕಾರಿನಲ್ಲಿ ಇದ್ದ ಒಬ್ಬ ಸ್ನೇಹಿತನಿಗೂ ಗಾಯವಾಗಿದ್ದು, ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ ಠಾಣಾ ಸಂಚಾರ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News