ಲಾಕ್‌ಡೌನ್‌: ಶೇ.42ರಷ್ಟು ಕಾರ್ಮಿಕರ ಬಳಿ ಒಂದು ದಿನದ ಆಹಾರಧಾನ್ಯವೂ ಇಲ್ಲ

Update: 2020-04-06 16:50 GMT

ಹೊಸದಿಲ್ಲಿ,ಎ.6: ಶೇ.42ರಷ್ಟು ವಲಸೆ ಕಾರ್ಮಿಕರ ಬಳಿ ಇಡೀ ಲಾಕ್‌ಡೌನ್ ಅವಧಿ ಬಿಡಿ,ಒಂದು ದಿನದ ಮಟ್ಟಿಗೂ ಕೂಳು ಬೇಯಿಸಲು ಆಹಾರ ಧಾನ್ಯಗಳಿಲ್ಲ ಎಂದು ಮಧ್ಯಪ್ರದೇಶದ ದೇವಾಸ್ ಮೂಲದ ಎನ್‌ಜಿಒ ‘ಜನ್ ಸಾಹಸ್’ ನಡೆಸಿರುವ ಸಮೀಕ್ಷೆಯು ಬಹಿರಂಗಗೊಳಿಸಿದೆ.

ಉತ್ತರ ಮತ್ತು ಮಧ್ಯ ಭಾರತದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ದೂರವಾಣಿ ಮೂಲಕ ನಡೆಸಲಾದ ಸಮೀಕ್ಷೆಯು 3,196 ವಲಸೆ ಕಾರ್ಮಿಕರನ್ನು ಒಳಗೊಂಡಿತ್ತು. ಲಾಕ್‌ ಡೌನ್‌ ನಿಂದಾಗಿ ಶೇ.92.5ರಷ್ಟು ಕಾರ್ಮಿಕರು ಒಂದು ವಾರದಿಂದ ಮೂರು ವಾರಗಳವರೆಗೆ ವಿವಿಧ ಅವಧಿಗಳಿಂದ ನಿರುದ್ಯೋಗಿಗಳಾಗಿದ್ದಾರೆ ಎನ್ನುವುದನ್ನೂ ಸಮೀಕ್ಷೆಯು ದೃಢಪಡಿಸಿದೆ.

ಲಾಕ್‌ಡೌನ್ 21 ದಿನಗಳನ್ನೂ ಮೀರಿ ಮುಂದುವರಿದರೆ ಒಂದು ವಾರಕ್ಕೂ ಹೆಚ್ಚಿನ ಅವಧಿಗೆ ಮನೆ ಖರ್ಚುಗಳನ್ನು ನಿರ್ವಹಿಸಲು ತಮಗೆ ಸಾಧ್ಯವಾಗುವುದಿಲ್ಲ ಎಂದು ಕನಿಷ್ಠ ಶೇ.66ರಷ್ಟು ಕಾರ್ಮಿಕರು ಹೇಳಿದ್ದಾರೆ.

 ಲಾಕ್‌ಡೌನ್‌ನಿಂದಾಗಿ ತಾವು ಇದ್ದಲ್ಲಿಯೇ ಅತಂತ್ರರಾಗಿದ್ದೇವೆ, ಆಹಾರ,ನೀರು ಸರಿಯಾಗಿ ದೊರೆಯುತ್ತಿಲ್ಲ. ತಮ್ಮ ಬಳಿ ಹಣವೂ ಇಲ್ಲ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.33ರಷ್ಟು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಸುಮಾರು ಅರ್ಧದಷ್ಟು ವಲಸೆ ಕಾರ್ಮಿಕರು ಈಗಾಗಲೇ ತಮ್ಮ ಸ್ವಗ್ರಾಮಗಳನ್ನು ಸೇರಿಕೊಂಡಿದ್ದಾರಾದರೂ ಅವರಿಗೆ ಅಲ್ಲಿ ಯಾವುದೇ ಆದಾಯವಿಲ್ಲ, ಪಡಿತರ ಧಾನ್ಯಗಳೂ ಸಿಗುತ್ತಿಲ್ಲ. ಜೊತೆಗೆ ಇನ್ನೂ ಹಲವಾರು ಸವಾಲುಗಳನ್ನು ಅವರು ಎದುರಿಸುತ್ತಿದ್ದಾರೆ.

ತಾವು ಸಾಲಗಳನ್ನು ಮಾಡಿಕೊಂಡಿದ್ದೇವೆ ಮತ್ತು ಉದ್ಯೋಗವಿಲ್ಲದೆ ಅದನ್ನು ತೀರಿಸುವುದು ಕಷ್ಟವಾಗಲಿದೆ ಎಂದು ಶೇ.33ರಷ್ಟು ಕಾರ್ಮಿಕರು ಒಪ್ಪಿಕೊಂಡಿದ್ದಾರೆ. ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿರುವವರ ಮೂರು ಪಟ್ಟು ಜನರು ಖಾಸಗಿ ಲೇವಾದೇವಿದಾರರಿಂದ ಸಾಲವನ್ನು ಪಡೆದಿದ್ದಾರೆ. ಸಾಲವನ್ನು ಪಡೆದಿರುವ ಶೇ.79ರಷ್ಟು ಜನರಿಗೆ ಸದ್ಯೋಭವಿಷ್ಯದಲ್ಲಿ ಅದನ್ನು ತೀರಿಸಲು ಸಾಧ್ಯವಾಗುವುದಿಲ್ಲ ಎಂಬ ಆತಂಕವಿದ್ದರೆ,ಶೇ.50ರಷ್ಟು ಕಾರ್ಮಿಕರಿಗೆ ಸಾಲವನ್ನು ತೀರಿಸಲು ತಮ್ಮ ಅಸಾಮರ್ಥ್ಯ ತಮ್ಮನ್ನು ಹಿಂಸಾಚಾರಕ್ಕೆ ತುತ್ತಾಗಿಸಬಹುದು ಎಂಬ ಭೀತಿ ಕಾಡುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.

 ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸೆಸ್ ಕಾಯ್ದೆಯಡಿ ಕಾರ್ಮಿಕ ಕಲ್ಯಾಣ ಮಂಡಳಿಗಳು ಸಂಗ್ರಹಿಸಿರುವ ಸೆಸ್ ನಿಧಿಯಿಂದ ನಿರ್ಮಾಣ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ ಮೂಲಕ ಹಣವನ್ನು ವರ್ಗಾಯಿಸುವಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2020,ಮಾ.24ರಂದು ನಿರ್ದೇಶವನ್ನು ಹೊರಡಿಸಿದೆ. ಆದರೆ ಶೇ.94ರಷ್ಟು ಕಾರ್ಮಿಕರ ಬಳಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಗುರುತು ಚೀಟಿಯಿಲ್ಲ,ಹೀಗಾಗಿ ಅವರಿಗೆ ಸರಕಾರದ ಈ ಘೋಷಣೆಯ ಲಾಭ ಮರೀಚಿಕೆಯಾಗಿದೆ ಎಂದು ಸಮೀಕ್ಷೆಯು ಬೆಟ್ಟು ಮಾಡಿದೆ.

ಸರಾಸರಿ ನಾಲ್ವರು ಕುಟುಂಬ ಸದಸ್ಯರ ಪೋಷಣೆಗಾಗಿ ಶೇ.55ರಷ್ಟು ಕಾರ್ಮಿಕರು ದಿನಕ್ಕೆ 200 ರೂ.-400 ರೂ.ಆದಾಯ ಗಳಿಸುತ್ತಿದ್ದರೆ, ಶೇ.39ರಷ್ಟು ಜನರು 400 ರೂ-600 ರೂ.ಗಳನ್ನು ದುಡಿಯುತ್ತಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News