ವಾರದಲ್ಲೇ 17 ಸಾವಿರಕ್ಕೇರಲಿದೆ ಭಾರತದ ಕೊರೋನ ಸೋಂಕಿತರ ಸಂಖ್ಯೆ!

Update: 2020-04-07 03:41 GMT

ಹೊಸದಿಲ್ಲಿ, ಎ.7: ಭಾರತದಲ್ಲಿ ಕೊರೋನ ವೈರಸ್ ಇದೇ ವೇಗದಲ್ಲಿ ಹರಡಿದರೆ, ದೇಶವ್ಯಾಪಿ ಲಾಕ್‌ಡೌನ್ ಮುಗಿಯುವ ವೇಳೆಗೆ ಅಂದರೆ ಎಪ್ರಿಲ್ 14ರ ವೇಳೆಗೆ ಒಟ್ಟು ಸೊಂಕಿತರ ಸಂಖ್ಯೆ 17 ಸಾವಿರದ ಗಡಿ ದಾಟಲಿದೆ ಎನ್ನುವುದು ಅಂಕಿಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ.

ಭಾರತದಲ್ಲಿ ಇದುವರೆಗೆ 4,281 ಮಂದಿಗೆ ಕೋವಿಡ್-19 ಸೋಂಕು ತಗುಲಿದ್ದು, 111 ಮಂದಿ ಬಲಿಯಾಗಿದ್ದಾರೆ. ವಾರದ ಹಿಂದೆ ಕೋವಿಡ್- 19 ಸೋಂಕಿತರ ಸಂಖ್ಯೆ ಪ್ರತಿ ಆರು ದಿನಕ್ಕೆ ದ್ವಿಗುಣಗೊಳ್ಳುತ್ತಿತ್ತು. ಆದರೆ ಇದೀಗ ನಾಲ್ಕು ದಿನಗಳಿಗೇ ದುಪ್ಪಟ್ಟಾಗುತ್ತಿದೆ.

ಮಾರ್ಚ್ 15ರಿಂದ 20ರ ಅವಧಿಯಲ್ಲಿ ಐದು ದಿನಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ ಎರಡು ಪಟ್ಟಾಗಿದ್ದರೆ, ಮಾರ್ಚ್ 20 - 23ರ ಅವಧಿಯಲ್ಲಿ ಮೂರೇ ದಿನಕ್ಕೆ ದ್ವಿಗುಣಗೊಂಡಿದೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ತಿಳಿದುಬರುತ್ತದೆ. ಮಾರ್ಚ್ 23 - 29ರ ಅವಧಿಯಲ್ಲಿ ಆರು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದ್ದರೆ ಮಾರ್ಚ್ 29ರಿಂದ ಎಪ್ರಿಲ್ 6ರ ಅವಧಿಯಲ್ಲಿ ನಾಲ್ಕೇ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ.

ಈ ಮುನ್ಸೂಚನೆಯ ಹಿನ್ನೆಲೆಯಲ್ಲೇ ಪ್ರಧಾನಿ ನರೇಂದ್ರ ಮೋದಿಯವರು, ಕೋವಿಡ್-19 ವಿರುದ್ಧದ ಸುದೀರ್ಘ ಹೋರಾಟಕ್ಕೆ ಸಜ್ಜಾಗುವಂತೆ ಜನತೆಗೆ ಕರೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಇದುವರೆಗೆ 748 ಪ್ರಕರಣಗಳು ವರದಿಯಾಗಿದ್ದು, 45 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 571 ಪ್ರಕರಣಗಳು ಬೆಳಕಿಗೆ ಬಂದಿದ್ದು, ಐದು ಮಂದಿ ಬಲಿಯಾಗಿದ್ದಾರೆ. ದಿಲ್ಲಿ ಹಾಗೂ ತೆಲಂಗಾಣದಲ್ಲಿ ತಲಾ ಏಳು ಮಂದಿ ಮೃತಪಟ್ಟಿದ್ದು, ಕ್ರಮವಾಗಿ 523 ಮತ್ತು 321 ಪ್ರಕರಣಗಳು ಬೆಳಕಿಗೆ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News