ಕೇರಳದಲ್ಲಿ ದಕ್ಷಿಣ ಕೊರಿಯಾ ಮಾದರಿ ಕೋವಿಡ್ ಕಿಯೋಸ್ಕ್!

Update: 2020-04-07 04:09 GMT

ಎರ್ನಾಕುಲಂ, ಎ.7: ಕೇರಳದಲ್ಲಿ ಕೋವಿಡ್-19 ಶಂಕಿತರ ಗಂಟಲು ದ್ರವ ಸ್ಯಾಂಪಲ್ ಸಂಗ್ರಹಕ್ಕೆ ದಕ್ಷಿಣ ಕೊರಿಯಾ ಮಾದರಿಯ ಕಿಯೋಸ್ಕ್‌ಗಳನ್ನು ಆರಂಭಿಸಲಾಗಿದೆ. ಎರಡು ಅಂಥ ವಾಕ್-ಇನ್ ಸ್ಯಾಂಪಲ್ ಕಿಯೋಸ್ಕ್ (ಡಬ್ಲ್ಯುಐಎಸ್‌ಕೆ)ಗಳನ್ನು ಎರ್ನಾಕುಲಂ ಸರ್ಕಾರಿ ವೈದ್ಯಕೀಯ ಕಾಲೇಜು ಆವರಣದಲ್ಲಿ ಸೋಮವಾರ ಆರಂಭಿಸಲಾಗಿದೆ.

ಗಾಜಿನ ಕ್ಯಾಬಿನ್‌ನಂತಿರುವ ಈ ಕಿಯೋಸ್ಕ್‌ಗಳ ಒಳಭಾಗದ ವಾತಾವರಣ ಅಂದರೆ ವೈದ್ಯಕೀಯ ಸಿಬ್ಬಂದಿ ಇರುವ ಪರಿಸರ ಸದಾ ಸುರಕ್ಷಿತವಾಗಿರುತ್ತದೆ. ಕಿಯೋಸ್ಕ್‌ನ ಹೊರಗಿರುವ ರೋಗಿಗಳ ಗಂಟಲು ದ್ರವವನ್ನು ಕಿಯೋಸ್ಕ್‌ನ ಒಳಗಿರುವ ಸಿಬ್ಬಂದಿ ಸಂಗ್ರಹಿಸುತ್ತಾರೆ.
ದಕ್ಷಿಣ ಕೊರಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಲು ಇಂಥ ಕಿಯೋಸ್ಕ್‌ಗಳನ್ನು ತೆರೆದದ್ದು ದೊಡ್ಡ ಸುದ್ದಿಯಾಗಿತ್ತು. ಎರ್ನಾಕುಲಂ ಜಿಲ್ಲಾಡಳಿತದ ಪ್ರಕಾರ, ಕೊಚ್ಚಿಯಲ್ಲಿ ಆರಂಭಿಸಿದ ಇಂಥ ಕಿಯೋಸ್ಕ್ ಇಡೀ ದೇಶದಲ್ಲೇ ಮೊದಲ ಪ್ರಯೋಗ. ಜಾರ್ಖಂಡ್‌ನಲ್ಲೂ ಇಂಥ ಕಿಯೋಸ್ಕ್ ಆರಂಭಿಸಲಾಗಿದೆ.

ಚೇಂಬರ್‌ನ ಹೊರಗೆ ಕುಳಿತ ಜನರಿಂದ ಗಂಟಲು ದ್ರವ ಸಂಗ್ರಹಕ್ಕೆ ವೈದ್ಯಕೀಯ ಸಿಬ್ಬಂದಿ ಕಿಯೋಸ್ಕ್‌ನಲ್ಲಿ ಅಳವಡಿಸಲಾದ ಕೈಗವಸುಗಳನ್ನು ಬಳಸಲಿದ್ದಾರೆ. ಇದಲ್ಲದೇ ಆಯಸ್ಕಾಂತೀಯ ಬಾಗಿಲು, ಅತಿನೇರಳೆ ದೀಪ ಮತ್ತು ಎಕ್ಸಾಸ್ಟ್ ಫ್ಯಾಸ್ ಅಳವಡಿಸಲಾಗಿರುತ್ತದೆ.

ಕಿಯೋಸ್ಕ್‌ನ ಹೊರಗಿರುವ ವ್ಯಕ್ತಿ ಗಂಟಲು ದ್ರವ ಸಂಗ್ರಹಿಸಲು ಉಪಕರಣ ಹಿಡಿದಿರುತ್ತಾರೆ. ಕಿಯೋಸ್ಕ್ ಒಳಗಿರುವ ವೈದ್ಯ ಸಿಬ್ಬಂದಿ ಕೈಗವಸು ಬಳಸಿ ಆ ಉಪಕರಣ ಪಡೆಯುತ್ತಾರೆ. ಮಾದರಿ ಪಡೆದ ಬಳಿಕ, ವ್ಯಕ್ತಿಗೆ ಅದನ್ನು ಹಿಂದಿರುಗಿಸಲಾಗುತ್ತದೆ. ಆ ವ್ಯಕ್ತಿ ಮತ್ತೆ ಅದನ್ನು ಮತ್ತೊಬ್ಬ ವೈದ್ಯಕೀಯ ಸಿಬ್ಬಂದಿಗೆ ಹಸ್ತಾಂತರಿಸುತ್ತಾರೆ.

ಈ ವ್ಯವಸ್ಥೆ ಮೂಲಕ ಮಾದರಿ ಸಂಗ್ರಹಿಸುವುದು ಅಗ್ಗ ಹಾಗೂ ಸರಳ. ಇದರಿಂದ ಹೆಚ್ಚಿನ ಮಾದರಿ ಸಂಗ್ರಹಿಸಲು ಸಾಧ್ಯ ಎಂದು ಎರ್ನಾಕುಲಂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಟ್ಟಪ್ಪನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News