ತಬ್ಲೀಗಿ ಸದಸ್ಯರು ಬೆಳಗಾವಿ ಆಸ್ಪತ್ರೆ ಸಿಬ್ಬಂದಿ ಮೇಲೆ ಉಗುಳಿದರು ಎಂಬ ಸಂಸದೆ ಶೋಭಾ ಹೇಳಿಕೆ ಸುಳ್ಳು

Update: 2020-04-07 05:44 GMT

ತಬ್ಲೀಗಿ ಜಮಾಅತ್ ಸದಸ್ಯರ ವಿರುದ್ಧದ ವ್ಯಾಪಕ ಅಪಪ್ರಚಾರ ಅಭಿಯಾನದಲ್ಲಿ ಹರಡಲಾದ ಹಲವು ವದಂತಿಗಳು, ಸುದ್ದಿಗಳು ಒಂದೊಂದಾಗಿ ಸುಳ್ಳು ಎಂದು ಸಾಬೀತಾಗುತ್ತಾ ಬಂದಿವೆ. ಅದಕ್ಕೆ ಹೊಸ ಸೇರ್ಪಡೆ ತಬ್ಲೀಗಿ ಸದಸ್ಯರ ವಿರುದ್ಧ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಮಾಡಿದ್ದ ಗಂಭೀರ ಆರೋಪಗಳು. ಶೋಭಾ ಮಾಡಿದ್ದ ಆರೋಪ ಸಂಪೂರ್ಣ ಸುಳ್ಳು ಎಂದು ಇದೀಗ ತಿಳಿದು ಬಂದಿದೆ. 

ದಿಲ್ಲಿ ನಿಝಾಮುದ್ದೀನ್ ನಲ್ಲಿ ಭಾಗವಹಿಸಿದ್ದ ಕೆಲವು ತಬ್ಲೀಗಿ ಸದಸ್ಯರು ಬೆಳಗಾವಿಯಲ್ಲಿ ಕ್ವಾರಂಟೈನ್ ನಲ್ಲಿ ಇರುವಾಗ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿ ಅವರ ಮೇಲೆ ಉಗುಳಿದ್ದಾರೆ ಎಂದು ಶೋಭಾ ಸೋಮವಾರ ಟ್ವೀಟ್ ಮಾಡಿದ್ದರು. ಜೊತೆಗೆ ಮಾಧ್ಯಮದವರ ಜೊತೆ ಮಾತನಾಡುತ್ತಾ ತಬ್ಲೀಗಿಗಳು ಕೊರೋನ ಜಿಹಾದ್ ಮಾಡುತ್ತಿದ್ದಾರೆ. ಅವರಿಗೆ ಜೀವಾವಧಿ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ್ದರು. 

ಆದರೆ ಶೋಭಾ ಟ್ವೀಟ್ ಮಾಡಿದ್ದು ಸುಳ್ಳು ಎಂದು ಈಗ ಸಾಬೀತಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರು ಇಂತಹ ಯಾವುದೇ ಘಟನೆ ನಡೆದಿಲ್ಲ. ತಬ್ಲೀಗಿಗಳು ಯಾರೊಂದಿಗೂ ಅನುಚಿತ ವರ್ತನೆ ತೋರಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ thenewsminute.com  ವರದಿ ಮಾಡಿದೆ.  

ಶೋಭಾ ಇನ್ನೊಂದು ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ಐಸೋಲೇಷನ್ ವಾರ್ಡ್ ನೊಳಗೆ ವ್ಯಕ್ತಿಯೊಬ್ಬ ಸ್ವಲ್ಪ ಹೊತ್ತು ಡಾನ್ಸ್ ಮಾಡಿದ್ದು ಕಾಣುತ್ತಿತ್ತು. ಹಾಗು ವಾರ್ಡ್ ನೊಳಗಿರುವ ಜನರು ಕಿಟಕಿ ಮೂಲಕ ಹೊರಗಿರುವವರೊಂದಿಗೆ ಮಾತನಾಡಿ ಇಲ್ಲಿ ಕೊರೋನ ಪಾಸಿಟಿವ್ ಆಗಿರುವವರು ಇನ್ನೂ ಪಾಸಿಟಿವ್ ಆಗದವರ ಜೊತೆ ಬೆರೆಯುತ್ತಿದ್ದಾರೆ ಎಂದು ಹೇಳುವುದು ಕೇಳಿ ಬರುತ್ತಿತ್ತು. ಜೊತೆಗೆ ಟ್ವೀಟ್ ನಲ್ಲಿ "ಬೆಳಗಾವಿಯಿಂದ 70 ತಬ್ಲೀಗಿಗಳು ನಿಝಾಮುದ್ದೀನ್ ಗೆ ಹೋಗಿದ್ದರು. ಆ ಪೈಕಿ 8 ಮಂದಿ ಪಾಸಿಟಿವ್ ಬಂದಿದ್ದಾರೆ. ಉಳಿದವರ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ" ಎಂದೂ ಹೇಳಿದ್ದರು ಶೋಭಾ. 

ಆದರೆ ಇದನ್ನು ಸಂಪೂರ್ಣ ನಿರಾಕರಿಸಿರುವ ಬೆಳಗಾವಿ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕ ಡಾ. ವಿನಯ್ ಬಸ್ತಿಕೊಪ್ಪ ಅವರು, ನಿಝಾಮುದ್ದೀನ್ ಗೆ ಹೋದ 33 ಜನ ತಬ್ಲೀಗಿ ಸದಸ್ಯರು ಮಾತ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆ ಪೈಕಿ ಪಾಸಿಟಿವ್ ಬಂದ ಮೂವರನ್ನು ಪ್ರತ್ಯೇಕ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಲಾಗಿತ್ತು ಎಂದು ಹೇಳಿದ್ದಾರೆ. 

ದಿಲ್ಲಿಗೆ ಪ್ರಯಾಣ ಬೆಳೆಸಿದ್ದ 33 ತಬ್ಲೀಗಿ ಜಮಾಅತ್ ಸದಸ್ಯರನ್ನು ಮಾರ್ಚ್ 31ಕ್ಕೆ ಬಿಐಎಂಎಸ್ ಗೆ ದಾಖಲಿಸಲಾಗಿತ್ತು. ಅವರ ಗಂಟಲ ದ್ರವವನ್ನು ಎಪ್ರಿಲ್ 1ರಂದು ಪರೀಕ್ಷೆಗಾಗಿ  ತೆಗೆಯಲಾಗಿತ್ತು. ಅವುಗಳನ್ನು ಶಿವಮೊಗ್ಗ ವಿಡಿಆರ್ ಎಲ್ ಲ್ಯಾಬ್ ಗೆ ಕಳಿಸಲಾಗಿತ್ತು. ಎಪ್ರಿಲ್ 3ರಂದು ಅದರ ಫಲಿತಾಂಶ ಬಂತು. 3 ಮಂದಿಗೆ ಪಾಸಿಟಿವ್ ಬಂದಿತ್ತು. ಅವರನ್ನು ಪ್ರತ್ಯೇಕ ಐಸೋಲೇಷನ್ ವಾರ್ಡ್ ನಲ್ಲಿಟ್ಟು ಉಳಿದವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಜಿಲ್ಲಾಡಳಿತದ ಪ್ರತ್ಯೇಕ ಕಟ್ಟಡದಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಅವರ ಮೇಲೆ ನಿಗಾ ಇಡಲಾಗುವುದು. ಆಸ್ಪತ್ರೆಯಲ್ಲಿರುವ ಎಲ್ಲರಿಗೂ ನೀತಿನಿಯಮಗಳನ್ನು ವಿವರಿಸಲಾಗಿದೆ ಮತ್ತು ಎಲ್ಲ ಚಿಕಿತ್ಸೆ ನಿಯಮ ಪ್ರಕಾರ ನಡೆಯುತ್ತಿದೆ" ಎಂದು ಡಾ.ವಿನಯ್ ಹೇಳಿದ್ದಾರೆ. 

ಶೋಭಾ ಕರಂದ್ಲಾಜೆ ಸುಳ್ಳು ಸುದ್ದಿ ಹರಡಿ ಬಳಿಕ ನುಣುಚಿಕೊಳ್ಳುವುದು ಇದೇ ಮೊದಲಲ್ಲ. ಈ ಹಿಂದೆ ಜೀವಂತ ಇದ್ದ ವ್ಯಕ್ತಿಯ ಹೆಸರನ್ನು ಸತ್ತವರ ಪಟ್ಟಿಯಲ್ಲಿ ಹಾಕಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೇಶ್ ಮೇಸ್ತ ಎಂಬ ಯುವಕ ಮೃತಪಟ್ಟಾಗ ಆತನಿಗೆ ಚಿತ್ರಹಿಂಸೆ ನೀಡಿ ದೇಹದ ಅಂಗಾಂಗಗಳನ್ನು ಕತ್ತರಿಸಿ ಕೊಲ್ಲಲಾಗಿದೆ ಎಂದು ಹೇಳಿದ್ದರು ಶೋಭಾ. ಅದು ಸುಳ್ಳು ಎಂದು ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News