ಭಾರತ ಮಲೇರಿಯಾ ನಿರೋಧಕ ಔಷಧ ರಫ್ತು ಮಾಡದೇ ಇದ್ದರೆ ಪ್ರತೀಕಾರದ ಕ್ರಮ: ಟ್ರಂಪ್

Update: 2020-04-07 06:30 GMT

ವಾಷಿಂಗ್ಟನ್, ಎ.7: ಅಮೆರಿಕ ಬೇಡಿಕೆಯಿಟ್ಟಿರುವ ಮಲೇರಿಯಾ ಚಿಕಿತ್ಸೆಗೆ ನೀಡಲಾಗುವ ಹೈಡ್ರೋಕ್ಸಿಕ್ಲೊರೊಖ್ವೀನ್ ಔಷಧಗಳನ್ನು ಪೂರೈಸಲು ಭಾರತ ಒಪ್ಪದೇ ಇದ್ದಲ್ಲಿ 'ಪ್ರತೀಕಾರದ ಕ್ರಮ' ಇರಬಹುದು ಎಂಬ ಸುಳಿವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. 

ಅಮೆರಿಕದಲ್ಲಿ ಹೆಚ್ಚುತ್ತಿರುವ ಕೊರೋನ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ರೋಗಿಗಳ ಚಿಕಿತ್ಸೆಗೆ ಈ ಔಷಧಿಗಳ ರಫ್ತನ್ನು ಭಾರತ ನಿಷೇಧಿಸಿರುವ ಹೊರತಾಗಿಯೂ ಅಮೆರಿಕಾಗೆ ರಫ್ತುಗೊಳಿಸಬೇಕೆಂದು ಇತ್ತೀಚೆಗಷ್ಟೇ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಕೋರಿದ್ದರು.

‘‘ಭಾರತವು ಅಮೆರಿಕದೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಅವರು (ಪ್ರಧಾನಿ ಮೋದಿ) ಒಪ್ಪದೇ ಇದ್ದರೆ ನನಗೆ ಅಚ್ಚರಿಯಾಗುವುದು’’ ಎಂದು ಟ್ರಂಪ್ ಹೇಳಿದರು. ‘‘ಅಂತಹ ತೀರ್ಮಾನ ನನಗೆ ಒಪ್ಪಿಗೆಯಾಗುವುದಿಲ್ಲ. ರಫ್ತನ್ನು ಇತರ ದೇಶಗಳಿಗೆ ನಿಲ್ಲಿಸಿದ್ದಾರೆಂದು ಗೊತ್ತು. ಅವರ ಜತೆ ಮಾತನಾಡಿದ್ದೇನೆ. ಮಾತುಕತೆಗಳು ಉತ್ತಮವಾಗಿತ್ತು. ಹಲವಾರು ವರ್ಷಗಳಿಂದ ವ್ಯಾಪಾರ ಕುರಿತಂತೆ ಅವರು ನಮ್ಮಿಂದ ಲಾಭ ಪಡೆದಿದ್ದಾರೆ. ರಫ್ತು ಮಾಡದೇ ಇರಲು ಅವರು ನಿರ್ಧರಿಸಿದರೆ ಇದು ಅವರ ತೀರ್ಮಾನವೇ ಎಂದು ತಿಳಿದು ನನಗೆ ಅಚ್ಚರಿಯಾಗಬಹುದು. ಅವರು ನನಗೆ ಹೇಳಬೇಕು. ಅವರು ಒಪ್ಪದೇ ಇದ್ದರೆ ಪ್ರತೀಕಾರವಿರಬಹುದು. ಏಕಿರಬಾರದು?’’ ಎಂದು ಟ್ರಂಪ್ ಹೇಳಿದ್ದಾರೆ.

ಮಲೇರಿಯಾ ಚಿಕಿತ್ಸೆಗೆ ನೀಡಲಾಗುವ ಹೈಡ್ರೋಕ್ಸಿಕ್ಲೊರೋಖ್ವೀನ್ ಔಷಧಿಯು ಕೋವಿಡ್-19 ಚಿಕಿತ್ಸೆಗೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಟ್ರಂಪ್ ಹೇಳುತ್ತಲೇ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News