ಲಾಕ್‌ಡೌನ್ ವಿಸ್ತರಿಸಲು ವೈದ್ಯಕೀಯ ಕಾರಣವಿಲ್ಲ: ರಾಜ್ಯ ಸರಕಾರ ನೇಮಿಸಿದ ತಜ್ಞರ ಸಮಿತಿ ವರದಿ

Update: 2020-04-09 17:38 GMT

ಬೆಂಗಳೂರು, ಎ.9: ಲಾಕ್‌ಡೌನ್ ಅನ್ನು 21 ದಿನದ ಬಳಿಕವೂ ಮುಂದುವರಿಸಲು ಯಾವುದೇ ವೈದ್ಯಕೀಯ ಕಾರಣವಿಲ್ಲ . ದೇಶದ ಜನಸಂಖ್ಯೆಯ ಕೇವಲ 6%ದಷ್ಟು ಜನರು ಮಾತ್ರ ಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಭಾರತ ಸುದೀರ್ಘಾವಧಿಯ ಲಾಕ್‌ಡೌನ್‌ನ ಪರಿಣಾಮವನ್ನು ತಾಳಿಕೊಳ್ಳದು ಎಂದು ರಾಜ್ಯ ಸರಕಾರ ನೇಮಿಸಿರುವ ತಜ್ಞರ ಸಮಿತಿ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

ಮುಂದಿನ ಕೆಲ ದಿನಗಳಲ್ಲಿ ಸೋಂಕು ತೀವ್ರಗೊಳ್ಳುವ ಸಾಧ್ಯತೆಯಿದೆ. ಆದರೆ ಕ್ರಮೇಣ ಇಳಿಮುಖವಾಗಬಹುದು. ಲಾಕ್‌ಡೌನ್ ಮುಕ್ತಾಯವಾದ ತಕ್ಷಣವೇ ದೇಶದಲ್ಲಿ ಕೊರೋನ ವಿರುದ್ಧದ ಸಮರದಲ್ಲಿ ಚುರುಕಾದ ಮತ್ತು ಅಸಾಂಪ್ರದಾಯಿಕ ಯೋಜನೆಗಳನ್ನು ಅನುಸರಿಸುವ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸುದೀರ್ಘಾವಧಿಯ ಲಾಕ್‌ಡೌನ್‌ನಿಂದ ಉದ್ಯಮಕ್ಷೇತ್ರದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಪರಿಸ್ಥಿತಿಗೆ ಕಾರಣವಾಗಬಹುದು. ಮುಂದಿನ ಕನಿಷ್ಟ 6 ತಿಂಗಳವರೆಗೆ ಜೀವನ ಈ ಹಿಂದಿನಂತೆ ಇರಲಾರದು ಎಂಬ ಸಂದೇಶವನ್ನು ಎಲ್ಲರಿಗೂ ನೀಡಬಯಸುತ್ತೇವೆ ಎಂದು ಡಾ. ದೇವಿಶೆಟ್ಟಿ ಅಧ್ಯಕ್ಷತೆಯ ಸಮಿತಿ ತಿಳಿಸಿದೆ. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಮಂಜುನಾಥ್, ರಾಜೀವಗಾಂಧಿ ಆಸ್ಪತ್ರೆಯ ಡಾ ನಾಗರಾಜ್, ಡಾ ರವಿ ಹಾಗೂ ಡಾ ಸುದರ್ಶನ್ ಸಮಿತಿಯ ಸದಸ್ಯರಾಗಿದ್ದಾರೆ.

ತಜ್ಞರ ಸಮಿತಿಯ ಕೆಲವು ಶಿಫಾರಸುಗಳನ್ನು ಗುರುವಾರ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಸ್ತಾವಿಸಲಾಗಿದ್ದು ವರದಿಯಲ್ಲಿ ಎರಡು ವಾರಗಳ ವಿರಾಮದಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ಕೊನೆಗೊಳಿಸಲು ಸಲಹೆ ನೀಡಲಾಗಿದೆ.

ಸಮಿತಿಯ ವರದಿಯ ಮುಖ್ಯಾಂಶಗಳು ಹೀಗಿವೆ:

ಗಾರ್ಮೆಂಟ್ ಕಾರ್ಖಾನೆ, ಉತ್ಪಾದನಾ ಘಟಕ ಮತ್ತು ಸಣ್ಣ ಮತ್ತು ಮಧ್ಯಮ ಘಟಕಗಳನ್ನು ಲಾಕ್‌ಡೌನ್ ಮುಗಿದ ಮೊದಲ ವಾರದಲ್ಲಿ 50% ಸಿಬ್ಬಂದಿಗಳೊಂದಿಗೆ, ನಂತರದ ವಾರದಲ್ಲಿ ಇತರ 50% ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು.

ಸಾರ್ವಜನಿಕ ಸ್ಥಳಗಳಲ್ಲಿ , ಮಾಲ್, ಜಿಮ್, ಬಾರ್, ಸಿನೆಮ ಥಿಯೇಟರ್, ಧಾರ್ಮಿಕ ಸಂಸ್ಥೆಗಳಲ್ಲಿ ಜನರ ಸಂಚಾರವನ್ನು ನಿರ್ಬಂಧಿಸಬೇಕು. ಹಲವರು ಏಕಕಾಲದಲ್ಲಿ ಬಳಸುವ ಸಾರ್ವಜನಿಕ ಶೌಚಾಲಯಗಳ ಬಳಕೆಗೆ ಎಪ್ರಿಲ್ 30ರವರೆಗೆ ಅವಕಾಶ ನೀಡಬಾರದು.

ಚೀವಿಂಗ್ ಗಮ್ ಮತ್ತು ಪಾನ್ ಮಸಾಲವನ್ನು ಬಳಸಿ ಉಗಿಯುತ್ತಿರುವ ಕಾರಣ ಇದರ ಬಳಕೆಯನ್ನು ನಿರ್ಬಂಧಿಸಬೇಕು.

ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭ ಮುಂಚೂಣಿಯಲ್ಲಿ 60 ವರ್ಷಕ್ಕಿಂತ ಮೇಲಿನ ವೈದ್ಯರನ್ನು ನಿಯೋಜಿಸಬಾರದು. ಅಗತ್ಯಬಿದ್ದರೆ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನು ಬಳಸಿಕೊಳ್ಳಬೇಕು.

ಪ್ರಯಾಣಿಕರ ಮಧ್ಯೆ ಸಾಕಷ್ಟು ಅಂತರ ಕಾಯ್ದುಕೊಂಡು ಬಸ್ಸುಗಳ ಸಂಚಾರ ಆರಂಭಿಸಬಹುದು. ಆದರೆ ಎಪ್ರಿಲ್ 30ರವರೆಗೆ ಯಾವುದೇ ರೈಲು ಅಥವಾ ವಿಮಾನಗಳ ಪ್ರಯಾಣಕ್ಕೆ ಅವಕಾಶ ನೀಡಬಾರದು. ಅಂತರ್ ಜಿಲ್ಲಾ, ಅಂತರ್ ನಗರ ಮತ್ತು ಅಂತರ್ ರಾಜ್ಯಗಳ ಪ್ರಯಾಣವನ್ನು ನಿರ್ಬಂಧಿಸಬೇಕು. ಹವಾನಿಯಂತ್ರಿತ ವ್ಯವಸ್ಥೆ (ಎಸಿ) ಇಲ್ಲದ ಬಸ್ಸುಗಳ ಮತ್ತು ಆಟೋರಿಕ್ಷಾಗಳ ಸಂಚಾರಕ್ಕೆ ಅವಕಾಶ ನೀಡಬಹುದು.

ಜನರು ಬಳಸಿ ಬಿಸಾಡುವ ಮಾಸ್ಕ್‌ಗಳ ಬದಲು ಬಟ್ಟೆಯಿಂದ ತಯಾರಿಸಿದ, ಒಗೆದು ಮರು ಬಳಸಬಹುದಾದ ಮಾಸ್ಕ್‌ಗಳನ್ನು ಧರಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಬಳಸಿ ಬಿಸಾಡುವ ಮಾಸ್ಕ್‌ಗಳನ್ನು ಚಿಂದಿ ಆಯುವವರು ಹೆಕ್ಕಿ ಮರುಬಳಕೆಗೆ ಪೂರೈಸಿದರೆ ಅದರಿಂದ ವೈರಸ್ ಹಬ್ಬುವ ಅಪಾಯವಿದೆ ಎಂದು ಸಮಿತಿ ಎಚ್ಚರಿಸಿದೆ.

ಎಪ್ರಿಲ್ 22ರಂದು ಪರಿಸ್ಥಿತಿಯನ್ನು ಅವಲೋಕಿಸಿ, ಎಪ್ರಿಲ್ 30ರ ಬಳಿಕ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಶಿಫಾರಸು ರೂಪಿಸಲಾಗುವುದು ಎಂದು ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News