ಕೊರೋನ ಸೋಂಕಿತರ ಸಾವಿಗೆ ಕಾರಣ ಏನು ಗೊತ್ತೇ ?

Update: 2020-04-12 03:45 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೊರೋನ ವೈರಸ್ ರೋಗಪೀಡಿತರು ಹೃದಯಾಘಾತ, ಉಸಿರಾಟದ ವೈಫಲ್ಯ, ಬಹು ಅಂಗಾಂಗ ವೈಫಲ್ಯ ಅಥವಾ ಸೆಪ್ಟಿಕ್ ಶಾಕ್‌ನಿಂದ ಸಾಯುತ್ತಿದ್ದಾರೆ. ಆದರೆ ಸಾವಿನ ಕಾರಣ ಮಾತ್ರ ಕೋವಿಡ್-19 ಎನ್ನುವುದು ನಿರ್ವಿವಾದ ಎಂದು ವಿಜ್ಞಾನಿಗಳು ಮತ್ತು ಕ್ಲಿನಿಕಲ್ ತಜ್ಞರು ಸ್ಪಷ್ಟಪಡಿಸಿದ್ದಾರೆ. ಇತರ ಕಾರಣಗಳಿಂದ ಕೋವಿಡ್-19 ಸೋಂಕಿತರು ಸಾಯುತ್ತಿದ್ದಾರೆ ಎಂಬ ಸರ್ಕಾರಗಳ ವಾದವನ್ನು ಅಲ್ಲಗಳೆದಿದ್ದಾರೆ.

ತೀವ್ರ ಸ್ವರೂಪದ ನ್ಯುಮೋನಿಯಾದಂತೆ ಕೋವಿಡ್-19 ಉಸಿರಾಟ ವೈಫಲ್ಯ ಮತ್ತು ಹೃದಯಸ್ತಂಭನದಿಂದ ರೋಗಿಯನ್ನು ಸಾಯಿಸುತ್ತದೆ. ಆದರೆ ಇಲ್ಲಿ ಇರುವ ವ್ಯತ್ಯಾಸವೆಂದರೆ ಹೊಸ ವೈರಸ್ ವಿರುದ್ಧ ಪ್ರತಿರೋಧ ಶಕ್ತಿಯ ಕೊರತೆ ಹಾಗೂ ಸೋಂಕಿನ ತೀವ್ರತೆ ಹೆಚ್ಚಾಗಿರುವುದು ಎಂದು ಹೊಸದಿಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಮತ್ತು ಇಂಟಗ್ರೇಟಿವ್ ಬಯಾಲಜಿ ಸಂಸ್ಥೆಯ ನಿರ್ದೇಶಕ ಅನುರಾಗ್ ಅಗರ್‌ವಾಲ್ ಸ್ಪಷ್ಟಪಡಿಸುತ್ತಾರೆ.

ಈ ವಾರದ ಆರಂಭದಲ್ಲಿ ಗುರಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಸಾರ್ಸ್-ಕೋವ್-2 ಸೋಂಕಿನ ಕಾರಣದಿಂದ ಚಿಕಿತ್ಸೆಗೆ ದಾಖಲಿಸಲ್ಪಟ್ಟ 78 ವರ್ಷ ವಯಸ್ಸಿನ ಇಟೆಲಿ ಮಹಿಳೆ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಸಾರ್ಸ್-ಕೋವ್-2 ಪರೀಕ್ಷೆಯಲ್ಲಿ ಫಲಿತಾಂಶ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಇದನ್ನು ಕೋವಿಡ್-19 ಸಾವು ಎಂದು ವರ್ಗೀಕರಿಸಲಾಗಿತ್ತು.

ಆದರೆ ಮಹಿಳೆಯ ಸಾವಿಗೆ ಬಹು ಅಂಗಾಂಗ ವೈಫಲ್ಯವೂ ಕಾರಣ. ಕೋವಿಡ್-19 ಸೋಂಕಿನಿಂದಾಗಿ ಈ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಮೇದಾಂತ ಆಸ್ಪತ್ರೆಯ ಡಾ.ಯತಿನ್ ಮೆಹ್ತಾ ಹೇಳುತ್ತಾರೆ. ಮಹಿಳೆ ಗುರುವಾರ ಮೃತಪಟ್ಟರೆ, ಅವರ ಜತೆಗಿದ್ದ ಉಳಿದ 13 ಮಂದಿ ಎರಡು ವಾರ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.

ವಿಶ್ವದ ವಿವಿಧೆಡೆಯಿಂದ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ ಕೋವಿಡ್-19 ಸೋಂಕು ತಗುಲುವ ಐವರ ಪೈಕಿ ಒಬ್ಬರು ತೀವ್ರ ಅಸ್ವಸ್ಥರಾಗುತ್ತಾರೆ. ತೀವ್ರತರ ಶ್ವಾಸಕೋಶದ ರೋಗ, ಹೃದ್ರೋಗ ಮತ್ತು ಮಧುಮೇಹ, ಜೀವಕ್ಕೆ ಅಪಾಯ ತರುವ ಸಂಕೀರ್ಣತೆಗಳಿಗೆ ಪ್ರಮುಖ ಕಾರಣಗಳಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News