ಕೋವಿಡ್ -19: ಭಾರತದಲ್ಲಿ ಸಾವಿನ ಸಂಖ್ಯೆ 308ಕ್ಕೆ ಏರಿಕೆ

Update: 2020-04-13 05:33 GMT

ಹೊಸದಿಲ್ಲಿ, ಎ.13: ಭಾರತದಲ್ಲಿ ಮಹಾಮಾರಿ ಕೊರೋನ ವೈರಸ್  ಸೋಂಕು ತಗಲಿ ಮೃತಪಟ್ಟವರ ಸಂಖ್ಯೆ  308ಕ್ಕೆ ತಲುಪಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 35 ಮಂದಿ ಸಾವಿಗೀಡಾಗಿದ್ದಾರೆ.

 ಒಂದೇ ದಿನದ ಅವಧಿಯಲ್ಲಿ  620 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈವರೆಗೆ ದೇಶದಲ್ಲಿ  ಕೋವಿಡ್ -19 ಸೋಂಕು ಪ್ರಕರಣಗಳು   9152 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ  ಗರಿಷ್ಠ 2351 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 217 ಜನರು ಗುಣಮುಖರಾಗಿದ್ದಾರೆ ಮತ್ತು ಸೋಮವಾರದ ವೇಳೆಗೆ  149 ಸಾವು ಸಂಭವಿಸಿದೆ.

ಕಳೆದ ಮಂಗಳವಾರವೇ ರಾಜ್ಯದಲ್ಲಿ  1000 ಸೋಂಕು ಪ್ರಕರಣಗಳು ದಾಖಲಾಗಿತ್ತು.  ಆದರೆ ಕಳೆದ ಒಂಬತ್ತು ದಿನಗಳಲ್ಲಿ  ದಿನಕ್ಕೆ 100ಕ್ಕೂ ಅಧಿಕ  ಪ್ರಕರಣಗಳು  ವರದಿಯಾಗಿದೆ. ಕಳೆದ  ಮೂರು ದಿನಗಳಲ್ಲಿ  200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 1205 ಕೊರೋನ  ವೈರಸ್ ಸೋಂಕು  ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 24 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.

ಕೋವಿಡ್ -19  ಸೋಂಕು ಪ್ರಕರಣಗಳಲ್ಲಿ  ತಮಿಳುನಾಡು(1136) ಎರಡನೇ ಸ್ಥಾನದಲ್ಲಿದೆ. ಇಲ್ಲಿ 11 ಸಾವುಗಳು ಸಂಭವಿಸಿವೆ ಮತ್ತು 50 ಜನರು ಚೇತರಿಸಿಕೊಂಡಿದ್ದಾರೆ.

ಕೋವಿಡ್ -19 ಪ್ರಕರಣಗಳು  ಉಲ್ಬಣವನ್ನು ನಿಭಾಯಿಸಲು ರಾಜ್ಯ ಸಿದ್ಧವಾಗಿದೆ ಮತ್ತು 601 ಕೋವಿಡ್ -19 ಮೀಸಲಾದ ಆಸ್ಪತ್ರೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರತ್ಯೇಕ ಬೆಡ್ ಗಳನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ.

ಪೊಸಿಟಿವ್  ಪ್ರಕರಣಗಳನ್ನು ನಿಭಾಯಿಸುವ  ಕಾರ್ಯತಂತ್ರದ ಭಾಗವಾಗಿ ಮೂಲಸೌಕರ್ಯಗಳನ್ನು ಬಲಪಡಿಸುವುದು ಮತ್ತು ಮೇಲ್ವಿಚಾರಣೆ ಮಾಡುವ ಬಗ್ಗೆ ಅವರು ಗಮನಹರಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದ್ದಾರೆ.

ವಿಶ್ವದಾದ್ಯಂತ 18, 46,963 ಸೋಂಕು ಪ್ರಕರಣಗಳು ದೃಢಪಟ್ಟಿದೆ ಮತ್ತು 1,14,185 ಜನರು ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೋನ ವೈರಸ್ ಟ್ರ್ಯಾಕರ್ ಸೋಮವಾರ ಬೆಳಗ್ಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News