ರೈತರಿಂದ 35,000 ಕೆಜಿ ತರಕಾರಿ ಖರೀದಿಸಿ ಕ್ಷೇತ್ರದ ಜನರಿಗೆ ಉಚಿತವಾಗಿ ಹಂಚಿದ ಕೃಷ್ಣಬೈರೇಗೌಡ

Update: 2020-04-17 14:44 GMT

ಬೆಂಗಳೂರು, ಎ.17: ಕೊರೋನ ವೈರಸ್ ಲಾಕ್‍ಡೌನ್‍ನಿಂದಾಗಿ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸದೆ ಹಾಗೂ ಸೂಕ್ತ ಬೆಲೆ ಇಲ್ಲದ ಕಾರಣದಿಂದಾಗಿ ಕಂಗಾಲಾಗಿದ್ದ ರೈತರಿಂದ ಬರೋಬ್ಬರಿ 35 ಸಾವಿರ ಕೆಜಿ ತರಕಾರಿ ಖರೀದಿಸಿ ತಮ್ಮ ಕ್ಷೇತ್ರದ ಜನರಿಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ ಉಚಿತವಾಗಿ  ಹಂಚಿಕೆ ಮಾಡಿದ್ದಾರೆ.

ಶುಕ್ರವಾರ ನಗರದ ಕೆಂಪಾಪುರ, ಭಾರತಿನಗರ, ಹುಣಸೆಮಾರನಹಳ್ಳಿ ಸೇರಿದಂತೆ ಹಲವು ಕಡೆ ಉಚಿತವಾಗಿ ತರಕಾರಿ ಚೀಲಗಳನ್ನು ಸ್ವತಃ ಕೃಷ್ಣ ಬೈರೇಗೌಡ ಹಂಚಿಕೆ ಮಾಡಿದರು.

ಬೆಂಗಳೂರು ಹೊರವಲಯದ ರೈತರು ಕೆಂಪು ಮೂಲಂಗಿ, ಬದನೆಕಾಯಿ, ಟೊಮ್ಯಾಟೋ ಸೇರಿದಂತೆ ಇನ್ನಿತರೆ ತರಕಾರಿಗಳನ್ನು ಬೆಳೆದಿದ್ದು, ಮಾರುಕಟ್ಟೆಗೆ ಸಾಗಿಸಲು ಹಿಂದೇಟು ಹಾಕಿರುವುದಲ್ಲದೆ, ಬೆಲೆ ಇಲ್ಲದ ಕಾರಣ ಸುಮ್ಮನಾಗಿದ್ದರು. ಇದನ್ನು ಗಮನಿಸಿದ ಕೃಷ್ಣ ಬೈರೇಗೌಡ ಅವರು ರೈತರ ಹೊಲಕ್ಕೆ ಭೇಟಿ ನೀಡಿ ತರಕಾರಿ ಖರೀದಿಸಿದ್ದಾರೆ. ತಮ್ಮದೇ ವಾಹನಗಳಲ್ಲಿ ಸಾಗಣೆ ಮಾಡಿದ್ದಾರೆ. ತದನಂತರ ಕ್ಷೇತ್ರದಲ್ಲಿನ ಕಾರ್ಮಿಕರಿಗೆ, ಬಡವರ ಮನೆ ಬಾಗಿಲಿಗೆ ಉಚಿತವಾಗಿ ಹಂಚಿದ್ದಾರೆ.

ಜೊತೆಗೆ, ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಕ್ಷೇತ್ರದ ಸಾವಿರಾರು ಬಡ ಕುಟುಂಬಗಳಿಗೆ ಹಂಚಿಕೆ ಮಾಡಿದ್ದಾರೆ.

ಲಾಕ್‍ಡೌನ್ ಪರಿಣಾಮ ಕಾರ್ಮಿಕರು, ದಿನಕೂಲಿಕಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಕಳೆದ ವಾರದಿಂದ ರೈತರಿಗೆ ತರಕಾರಿ ಖರೀದಿಸಿ, ಸಮಸ್ಯೆಯಲ್ಲಿರುವ ಜನರಿಗೆ ಹಂಚಿಕೆ ಮಾಡಲಾಗುತ್ತಿದೆ.

-ಕೃಷ್ಣ ಬೈರೇಗೌಡ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News