ರಾಮನಗರ, ಆನೇಕಲ್ ನ ಹೂವು ಬೆಳೆಗಾರರಿಗೆ 500 ಕೋಟಿ ರೂ. ನಷ್ಟ: ಸಂಸದ ಡಿ.ಕೆ.ಸುರೇಶ್

Update: 2020-04-19 18:30 GMT

ರಾಮನಗರ, ಎ.19: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಿಸಿರುವುದರಿಂದ ರಾಮನಗರ ಜಿಲ್ಲೆ ಹಾಗೂ ಆನೇಕಲ್ ತಾಲೂಕಿನ ರೈತರು ಹೂ ಬೆಳೆಯಲ್ಲಿ ಸುಮಾರು 500 ಕೋಟಿ ರೂ. ಗಳಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಬಿಡದಿಯ ಹಿರಿಯ ಕಾಂಗ್ರೆಸ್ ಮುಖಂಡ ಬ್ಯಾಟಪ್ಪ ಬಡ ಕುಟುಂಬಗಳಿಗೆ ಒಂದು ಸಾವಿರ ಆಹಾರ ಕಿಟ್‍ಗಳನ್ನು ಹಾಗೂ ತಮ್ಮ ನೇತೃತ್ವದಲ್ಲಿ ಹಣ್ಣು, ತರಕಾರಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೊರೋನ ವೈರಾಣು ಇಂದಾಗಿ ರೈತರಿಗೆ ಈ ಪರಿಸ್ಥಿತಿ ಎದುರಾಗಿದೆ. ದೇವಸ್ಥಾನಗಳನ್ನು ಮುಚ್ಚಲಾಗಿದೆ. ಮದುವೆ ಸೇರಿದಂತೆ ಯಾವುದೇ ಬಗೆಯ ಶುಭ ಸಮಾರಂಭಗಳು ನಡೆಯುತ್ತಿಲ್ಲ. ರೈತರು ಬೆಳೆದಿರುವ ಹೂವಿನ ಬೆಳೆಯನ್ನು ರಫ್ತು ಮಾಡಲು ಸಾಧ್ಯವಾಗದೆ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಯ ಗಮನವನ್ನು ಸೆಳೆಯಲಾಗಿದೆ. ಅಲ್ಲದೆ, ಹೂವು ಬೆಳೆಗಾರರ ನೆರವಿಗೆ ಧಾವಿಸುವಂತೆ ಮನವಿ ಮಾಡಲಾಗಿದೆ ಎಂದು ಸುರೇಶ್ ತಿಳಿಸಿದರು.

ರಾಮನಗರ ಜಿಲ್ಲೆ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿನ ಸುಮಾರು 300 ರೈತರ ತೋಟಗಳಿಗೆ ಭೇಟಿ ನೀಡಿ, 2,500 ಟನ್‍ಗೂ ಹೆಚ್ಚು ಪ್ರಮಾಣದ ಹಣ್ಣುಗಳು, ತರಕಾರಿಗಳನ್ನು ಖರೀದಿ ಮಾಡಿ ಜಿಲ್ಲೆಯಲ್ಲಿರುವ ಬಡವರಿಗೆ ಹಂಚುತ್ತಿದ್ದೇವೆ. ಅದೇ ರೀತಿ, ನಮ್ಮ ಪಕ್ಷದ ಮುಖಂಡರು, ಶಾಸಕರಿಗೂ ರೈತರ ಬೆಳೆಗಳನ್ನು ಖರೀದಿಸಿ ಅಗತ್ಯ ಇರುವವರಿಗೆ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News