ಕೊರೋನ ಸೋಂಕು ಕಡಿಮೆ ಇರುವ ಪ್ರದೇಶಗಳಲ್ಲಿ ಇಂದಿನಿಂದ ಹಲವು ಚಟುವಟಿಕೆಗಳ ಪುನರಾರಂಭ

Update: 2020-04-19 18:38 GMT

ಹೊಸದಿಲ್ಲಿ, ಎ.19: ಕೊರೋನ ಸೋಂಕಿನ ಪರಿಣಾಮ ಕಡಿಮೆ ಇರುವ ಪ್ರದೇಶಗಳಲ್ಲಿ ಎಪ್ರಿಲ್ 20(ಸೋಮವಾರ)ರಿಂದ ಆರಂಭವಾಗಲಿರುವ ಸೇವೆ ಮತ್ತು ಚಟುವಟಿಕೆಗಳ ಹೊಸ ಪಟ್ಟಿಯನ್ನು ಕೇಂದ್ರದ ಗೃಹ ಇಲಾಖೆ ರವಿವಾರ ಬಿಡುಗಡೆಗೊಳಿಸಿದೆ.

ಕೊರೋನ ವೈರಸ್‌ನ ಪರಿಣಾಮ ಅತ್ಯಲ್ಪವಾಗಿರುವ ಪ್ರದೇಶಗಳಿಗೆ ಮಾತ್ರ ಲಾಕ್‌ಡೌನ್‌ನಿಂದ ವಿನಾಯಿತಿ ಅನ್ವಯಿಸುತ್ತದೆ. ಆರೋಗ್ಯಕ್ಷೇತ್ರ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಪಶು ಸಂಗೋಪನೆ ಕ್ಷೇತ್ರಗಳ ಚಟುವಟಿಕೆ ಸೋಮವಾರದಿಂದ ಆರಂಭವಾಗಲಿದೆ ಎಂದು ಕೇಂದ್ರದ ಕಾನೂನು ಮತ್ತು ಟೆಲಿಕಾಂ ಇಲಾಖೆಯ ಸಚಿವ ರವಿಶಂಕರ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

 ಗ್ರಾಮೀಣ ಪ್ರದೇಶಗಳಲ್ಲಿ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು, ನೀರು ಪೂರೈಕೆ, ವಿದ್ಯುಚ್ಛಕ್ತಿ ಮತ್ತು ಸಂಪರ್ಕ ಇಲಾಖೆಗಳು ಕಾರ್ಯನಿರ್ವಹಿಸಲಿವೆ.

  ಬಿದಿರು, ತೆಂಗಿನಕಾಯಿ, ಅಡಕೆ, ಕೋಕೊ, ಸಾಂಬಾರ ಬೆಳೆಗಳ ಕೃಷಿ, ಕಟಾವು, ಪರಿಷ್ಕರಣೆ, ಪ್ಯಾಕ್ ಮಾಡುವುದು, ಹಣ್ಣು ಮತ್ತು ತರಕಾರಿ ವಾಹನ, ಸ್ಯಾನಿಟರಿ ವಸ್ತುಗಳನ್ನು ಮಾರುವ ಅಂಗಡಿಗಳು, ದಿನಸಿ ಮತ್ತು ಪಡಿತರ ಸಾಮಾಗ್ರಿ ಮಾರುವ ಅಂಗಡಿಗಳು, ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟ, ಕೋಳಿ ಸಾಕಾಣಿಕೆ, ಮೇವು, ಮೀನು, ಮಾಂಸ ಮಾರುವ ಅಂಗಡಿಗಳು, ಇಲೆಕ್ಟ್ರೀಷಿಯನ್ಸ್, ಐಟಿ ರಿಪೇರಿ, ಪ್ಲಂಬಿಂಗ್ ಮಾಡುವವರು, ವಾಹನ ರಿಪೇರಿ, ಬಡಗಿಗಳು, ಕೊರಿಯರ್ ಸಾಗಿಸುವವರು, ಡಿಟಿಎಚ್ ಮತ್ತು ಕೇಬಲ್ ಸೇವೆ ಒದಗಿಸುವವರು ಕೆಲವೊಂದು ಪರಿಮಿತಿಗೆ ಒಳಪಟ್ಟು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

ಸರಕಾರದ ಕಾರ್ಯಕ್ಕೆ ಸಂಬಂಧಿಸಿದ ಡೇಟಾ ಕಾರ್ಯ ಹಾಗೂ ಕಾಲ್ ಸೆಂಟರ್‌ಗಳು, ಐಟಿ ಮತ್ತು ಸಂಬಂಧಿಸಿದ ಸೇವೆ ಒದಗಿಸುವ ಕಚೇರಿಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಆದರೆ 50% ಉದ್ಯೋಗಿಗಳೊಂದಿಗೆ ಕಾರ್ಯ ನಿರ್ವಹಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

 ಅಲ್ಲದೆ ಹೆದ್ದಾರಿಯ ಬದಿಯಲ್ಲಿರುವ ವಾಹನ ದುರಸ್ತಿ ಅಂಗಡಿ ಹಾಗೂ ದಾಬಾಗಳಿಗೂ ಸೋಮವಾರದಿಂದ ಕೆಲವೊಂದು ನಿಬರ್ಂಧದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

ಗ್ರಾಮೀಣ ಪ್ರದೇಶಗಳು ಸೋಮವಾರದಿಂದ ಹೆಚ್ಚು ನಿರಾಳವಾಗಲಿದೆ. ಇಟ್ಟಿಗೆ ಗೂಡುಗಳು(ಇಟ್ಟಿಗೆ ತಯಾರಿಸುವ ಕಾರ್ಖಾನೆ), ಆಹಾರ ಸಂಸ್ಕರಣಾ ಕೇಂದ್ರಗಳು, ಶೀತಾಗಾರಗಳು, ಗೋದಾಮುಗಳು ಕಾರ್ಯ ನಿರ್ವಹಿಸಲಿವೆ. ಮೀನುಗಾರಿಕೆ ಕ್ಷೇತ್ರದ ವ್ಯವಹಾರವೂ ಆರಂಭವಾಗಲಿದ್ದು ಮೀನುಗಳನ್ನು ಬೆಳೆಸುವುದು, ನಿರ್ವಹಣೆ, ಪರಿಷ್ಕರಣೆ, ಪ್ಯಾಕೇಜಿಂಗ್, ಮಾರುಕಟ್ಟೆಗೆ ಪೂರೈಕೆ, ಮಾರಾಟಕ್ಕೆ ಅವಕಾಶವಿದೆ. ಮೀನು ಸಾಕುವ ಕೇಂದ್ರ, ವಾಣಿಜ್ಯ ಉದ್ದೇಶದ ಅಕ್ವೇರಿಯಂಗಳು ಕಾರ್ಯ ನಿರ್ವಹಿಸಲಿವೆ.

 ಅಲ್ಲದೆ ನಗರದ ಹೊರವಲಯದಲ್ಲಿ ರಸ್ತೆ ನಿರ್ಮಾಣ ಕಾರ್ಯ, ನೀರಾವರಿ, ಕಟ್ಟಡ ನಿರ್ಮಾಣ, ನವೀಕರಿಸಬಹುದಾದ ಇಂಧನ ಹಾಗೂ ಎಲ್ಲಾ ರೀತಿಯ ಕೈಗಾರಿಕಾ ಯೋಜನೆಗಳೂ ಸೋಮವಾರದಿಂದ ಮತ್ತೆ ಆರಂಭವಾಗಲಿದೆ. ನಗರಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ನಡೆಸಬೇಕಿದ್ದರೆ ಸ್ಥಳೀಯವಾಗಿ ಲಭ್ಯವಿರುವ ಕಾರ್ಮಿಕರನ್ನು ಮಾತ್ರ ಬಳಸಬೇಕು ಎಂದು ಸರಕಾರ ಸೂಚಿಸಿದೆ.

 ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ , ಲಾಕ್‌ಡೌನ್‌ಗೆ ನೀಡುವ ವಿನಾಯಿತಿ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗದರ್ಶಿ ಸೂತ್ರಕ್ಕೆ ಅನುಗುಣವಾಗಿರಬೇಕು ಎಂದು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News