ಲಾಕ್‍ಡೌನ್‍: ಊಟ, ವಸತಿಗೆ ಪರದಾಡುವವರಿಗೆ ಗೂಗಲ್ ಸಹಾಯ

Update: 2020-04-21 14:39 GMT

ಬೆಂಗಳೂರು, ಎ.21: ಕೊರೋನ ಲಾಕ್‍ಡೌನ್‍ನಿಂದಾಗಿ ಆಹಾರಕ್ಕಾಗಿ ಪರದಾಟ ನಡೆಸುತ್ತಿದ್ದೀರಾ? ಸ್ವಯಂ ಸೇವಕರು, ಜನಪ್ರತಿನಿಧಿಗಳು ಯಾವ ಪ್ರದೇಶಗಳಲ್ಲಿ ಆಹಾರ ವಿತರಿಸುತ್ತಾರೆ ಎಂಬುದು ಗೊತ್ತಿಲ್ಲವೇ? ಎಷ್ಟು ಗಂಟೆವರೆಗೆ ವಿತರಣೆ ಕಾರ್ಯ ನಡೆಯಲಿದೆ? ಇದೀಗ ಈ ಎಲ್ಲ ಮಾಹಿತಿ ನಿಮ್ಮ ಬೆರಳ ತುದಿಯಲ್ಲಿದೆ! 

ನಿಮ್ಮ ಮೊಬೈಲ್‍ನಲ್ಲಿ ಇಂಟರ್‍ನೆಟ್ ಇದ್ದರೆ ಸಾಕು ಈ ಎಲ್ಲಾ ಮಾಹಿತಿ ತಿಳಿಯಬಹುದಾಗಿದೆ. ಗೂಗಲ್ ಕ್ಲಿಕ್ ಮಾಡಿದ ನಂತರ ಮಾಹಿತಿಗಾಗಿ ಟೈಪ್ ಮಾಡುವ ಸ್ಥಳದ ಕೆಳಗೆ 'Food shelters in <ನಗರ ಹೆಸರು>' ಅಥವಾ 'Night shelters in <ನಗರ ಹೆಸರು>' ಎಂದು ಟೈಪ್ ಮಾಡಿದರೆ 2 ಕಿ.ಮೀ ಹತ್ತಿರ ಆಹಾರ ದೊರೆಯುವ ಸ್ಥಳ, ಸಮಯ ತಿಳಿಯಬಹುದು.

ಕೊರೋನ ವೈರಸ್ ಭೀತಿ ಹಿನ್ನೆಲೆ ಸರಕಾರ ಲಾಕ್‍ಡೌನ್ ಘೋಷಿಸಿದ್ದು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ಒಂದೊತ್ತಿನ ಊಟಕ್ಕಾಗಿ ಪರದಾಟ ನಡೆಸುತ್ತಿದ್ದಾರೆ. ಇವರಿಗಾಗಿ ಸ್ವಯಂ ಸೇವಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ರಾಜಕೀಯ ಪಕ್ಷಗಳು ಊಟದ ವ್ಯವಸ್ಥೆ ಕಲ್ಪಿಸುತ್ತಿವೆ. ಆದರೆ, ಇದು ಪರಿಣಾಮಕಾರಿಯಾಗಿಲ್ಲ. ಏಕೆಂದರೆ, ಯಾವ ಸಮಯದಲ್ಲಿ, ಯಾವ ಸ್ಥಳದಲ್ಲಿ ಊಟ ವಿತರಿಸುತ್ತಾರೆ ಎಂಬುದೇ ಯಾರಿಗೂ ಗೊತ್ತಿಲ್ಲ. ಇದರಿಂದಾಗಿ ಕಾರ್ಮಿಕರು ಊಟವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಸ್ಯೆ ಬಾರದಂತೆ ಗೂಗಲ್‍ನಲ್ಲಿ ಎಲ್ಲ ಮಾಹಿತಿ ಲಭ್ಯವಾಗುವಂತೆ ಅವಕಾಶ ಮಾಡಿಕೊಡಲಾಗಿದೆ.

ರಾತ್ರಿ ಆಶ್ರಯ ಕೇಂದ್ರದ ಬಗ್ಗೆಯೂ ಮಾಹಿತಿ: ಸಿಗ್ನಲ್ ಗಳಲ್ಲಿ ಮಕ್ಕಳ ಆಟದ ವಸ್ತು ಮತ್ತು ಮನೆಯ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವವರು, ಬಡವರಿಗೆ ಆಶ್ರಯವೇ ಇಲ್ಲದಂತಾಗಿದೆ. ಕೊರೋನ ಸೋಂಕು ಹರಡುವ ಹಿನ್ನೆಲೆ ಇವರಿಗೆ ಮಾರಾಟ ವ್ಯವಸ್ಥೆ ಕಲ್ಪಿಸಿಲ್ಲ. ಅದರಲ್ಲೂ ಸಾರ್ವಜನಿಕರ ಓಡಾಟ ಬಂದ್ ಆಗಿರುವುದರಿಂದ ವ್ಯಾಪಾರ ಇಲ್ಲದಂತಾಗಿದೆ. ಇವರು ಊಟದ ಸಮಸ್ಯೆ ಮಾತ್ರವಲ್ಲದೇ ವಸತಿ ಸಮಸ್ಯೆಯೂ ಎದುರಾಗಿದೆ. ಇಂತವರಿಗಾಗಿ ರಾತ್ರಿ ಆಶ್ರಯ ಕೇಂದ್ರಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ.

ಬಡವರಿಗೆ ಮಾಹಿತಿ ಕೊರತೆ?
ಲಾಕ್‍ಡೌನ್ ಹಿನ್ನೆಲೆ ಕೂಲಿ ಕಾರ್ಮಿಕರು, ಬಡವರಿಗೆ ವಸತಿ, ಊಟಕ್ಕೆ ಸಮಸ್ಯೆ ಇರುವಾಗ ಸ್ಮಾರ್ಟ್ ಮೊಬೈಲ್ ಫೋನ್ ಇರುವುದು ಸಾಧ್ಯವೇ? ಬೆಂಗಳೂರಿನಲ್ಲಿ ಉತ್ತರ ಭಾರತದ ವಲಸಿಗರು ಇದ್ದು, ಊಟಕ್ಕೆ ಪರದಾಡುತ್ತಿದ್ದಾರೆ. ಇಂತವರು ಸ್ಮಾರ್ಟ್ ಫೋನ್‍ಗಳನ್ನು ಹೊಂದಿರುವುದು ಕಷ್ಟ ಸಾಧ್ಯವಾಗಿದೆ. ಗೂಗಲ್‍ನಲ್ಲಿ ಮಾಹಿತಿ ದೊರೆಯುತ್ತಿದ್ದರೂ, ಇದು ನಿರ್ಗತಿಕರಿಗೆ ಸದುಪಯೋಗವಾಗುವುದಿಲ್ಲ. ಹಾಗೆಯೇ ಫೋನ್ ಇದ್ದರೂ, ಮಾಹಿತಿ ಸಿಕ್ಕರೂ, ಆಹಾರ ನೀಡುವ ಸ್ಥಳಕ್ಕೆ ನಡೆದುಕೊಂಡೇ ಹೋಗಬೇಕು. ಮಾರ್ಗ ಮಧ್ಯದಲ್ಲಿ ಲಾಕ್‍ಡೌನ್ ಮತ್ತು ಸೀಲ್‍ಡೌನ್‍ನಿಂದ ತೊಂದರೆಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News