ಕೊರೋನ ವೈರಸನ್ನು ತಡೆಯುತ್ತದೆ ಧೂಮಪಾನ!?

Update: 2020-04-24 11:54 GMT

ನಮ್ಮ ಶ್ವಾಸಕೋಶದ ಮೇಲೆ ಕೋವಿಡ್-19 ವೈರಾಣು ದಾಳಿ ಮಾಡುವುದನ್ನು ಧೂಮಪಾನ ತಡೆಯಲಿದೆ ಎಂದು ಎಂದು ಫ್ರಾನ್ಸ್ ‍ನಲ್ಲಿ ನಡೆದ ಅಧ್ಯಯನವೊಂದು ಕಂಡುಕೊಂಡಿದೆ. ಈ ಮಾರಕ ಕಾಯಿಲೆಯನ್ನು ತಡೆಯಲು ಸಿಗರೇಟ್‍ ನಲ್ಲಿರುವ ನಿಕೋಟಿನ್ ಅಂಶವನ್ನು ಬಳಸಬಹುದೇ ಎಂಬ ಬಗ್ಗೆ ಪ್ರಯೋಗ ನಡೆಸಲು ಕೂಡಾ ಉದ್ದೇಶಿಸಲಾಗಿದೆ ಎಂದು ndtv.com ವರದಿ ಮಾಡಿದೆ.

ಪ್ಯಾರೀಸ್ ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದ 343 ಕೊರೋನಾವೈರಸ್ ಸೋಂಕಿತರನ್ನು ಪರೀಕ್ಷೆಗೆ ಗುರಿಪಡಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಫ್ರಾನ್ಸ್ ‍ನಲ್ಲಿ ಶೇಕಡ 35ರಷ್ಟು ಧೂಮಪಾನ ಮಾಡುವವರಿದ್ದರೆ, ದಾಖಲಾದ ಬಹುತೇಕ ಯಾವ ರೋಗಿಗಳೂ ಸಿಗರೇಟ್ ಸೇದುತ್ತಿರಲಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. “ಈ ರೋಗಿಗಳ ಪೈಕಿ ಶೇಕಡ 5ರಷ್ಟು ಮಾತ್ರ ಧೂಮಪಾನ ಮಾಡುವವರು” ಎಂದು ಅಧ್ಯಯನ ತಂಡದ ಮುಖ್ಯಸ್ಥರಾಗಿದ್ದ ಜಹೀರ್ ಅಮೋರಾ ಹೇಳಿದ್ದಾರೆ.

ಚೀನಾದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಚೀನಾದಲ್ಲಿ ಸೋಂಕಿತರಾದ 1000 ಮಂದಿಯ ಪರೀಕ್ಷೆ ನಡೆಸಿದಾಗ ಶೇಕಡ 12.6ರಷ್ಟು ಮಂದಿ ಮಾತ್ರ ಧೂಮಪಾನಿಗಳು ಎಂದು ತಿಳಿದುಬಂದಿದೆ. ಚೀನಾದಲ್ಲಿ ಒಟ್ಟಾರೆ ಶೇಕಡ 26ರಷ್ಟು ಧೂಮಪಾನ ಮಾಡುವವರಿದ್ದಾರೆ ಎನ್ನುವುದನ್ನು ಕೂಡಾ ಈ ಅಧ್ಯಯನ ವರದಿ ಉಲ್ಲೇಖಿಸಿದೆ.

ನಿಕೋಟಿನ್ ಶ್ವಾಸಕೋಶಕ್ಕೆ ಅಂಟಿಕೊಳ್ಳುವುದರಿಂದ ಕೊರೋನ ವೈರಸ್ ಕೋಶಗಳಿಗೆ ಪ್ರವೇಶಿಸುವುದನ್ನು ಮತ್ತು ದೇಹಕ್ಕೆ ಹರಡುವುದನ್ನು ತಡೆಯುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ತಡೆಗೆ ನಿಕೋಟಿನ್ ಬಳಸಬಹುದೇ ಎಂಬ ಬಗ್ಗೆ ಕೂಡಾ ಫ್ರಾನ್ಸ್‍ನಲ್ಲಿ ಪ್ರಯೋಗ ನಡೆಯುತ್ತಿದೆ. ಕೊರೋನಾ ವೈರಾಣು ದಾಳಿ ಮಾಡಿದಾಗ ದೇಹದ ಪ್ರತಿರೋಧ ಶಕ್ತಿಯ ಮೇಲೆ ನಡೆಯುವ “ಸೈಟೊಕಿನ್ ಸ್ಟಾರ್ಮ್” ತಡೆಯಲು ನಿಕೋಟಿನ್ ಬಳಸುವ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ.

ಆದರೆ ಇದರ ಅಡ್ಡ ಪರಿಣಾಮಗಳ ಬಗ್ಗೆಯೂ ಆಳವಾದ ಅಧ್ಯಯನ ನಡೆಯಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News