ವಿದೇಶಿ ಪ್ರಜೆಗಳ ಕ್ವಾರಂಟೈನ್: ರಾಜ್ಯ ಸರಕಾರದ ಕ್ರಮ ಖಂಡಿಸಿ ಬೀದಿಗಿಳಿದು ಪ್ರತಿಭಟಿಸಿದ ಬಿಜೆಪಿ ಶಾಸಕ

Update: 2020-04-24 15:03 GMT

ಬೆಂಗಳೂರು, ಎ.24: ಕೊರೋನ ಸೋಂಕು ಸಂಬಂಧ ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 35 ಮಂದಿಯನ್ನು ಖಾಸಗಿ ಹೋಟೆಲೊಂದರಲ್ಲಿ ಕ್ವಾರಂಟೈನ್ ಮಾಡಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಸ್ವತಃ ಬಿಜೆಪಿ ಶಾಸಕ ಸೇರಿದಂತೆ ಹಲವರು ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಇಲ್ಲಿನ ಖಾಸಗಿ ಹೋಟೆಲ್ ಮುಂಭಾಗ ಜಮಾಯಿಸಿದ ನೂರಾರು ಮಂದಿ, ಇಲ್ಲಿ ಯಾವುದೇ ಕಾರಣಕ್ಕೆ ವಿದೇಶಿ ಪ್ರಜೆಗಳನ್ನು ಕ್ವಾರಂಟೈನ್ ಮಾಡಬಾರದು. ರಾಜ್ಯ ಸರಕಾರ ಈ ಕೂಡಲೇ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಏನಿದು ಸ್ಥಳಾಂತರ: ಪಾದರಾಯನಪುರ ಗಲಾಟೆ ಆರೋಪ ಪ್ರಕರಣ ಸಂಬಂಧ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದ್ದ ಆರೋಪಿಗಳ ಪೈಕಿ ಕೆಲವರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆ, ಅವರನ್ನು ಬೆಂಗಳೂರಿನ ಹಜ್ ಭವನಕ್ಕೆ ಸ್ಥಳಾಂತರ ಮಾಡಲಾಯಿತು. ಆದರೆ, ಈ ಮೊದಲೇ ಹಜ್ ಭವನದಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ವಿದೇಶಿಯರು ಸೇರಿದಂತೆ 35 ಮಂದಿಯನ್ನು ಅಧಿಕಾರಿಗಳು ಇಲ್ಲಿನ ಖಾಸಗಿ ಹೋಟೆಲ್‍ಗೆ ಶುಕ್ರವಾರ ಸ್ಥಳಾಂತರ ಮಾಡಿದರು. ಆದರೆ, ಬಿಜೆಪಿ ಶಾಸಕರ ನೇತೃತ್ವದಲ್ಲಿಯೇ ಸರಕಾರದ ನಡೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

ನಿಯಮ ಉಲ್ಲಂಘನೆ: ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಹಾಗೂ ಲಾಕ್ ಡೌನ್ ಉಲ್ಲಂಘಿಸಿ ಖಾಸಗಿ ಹೋಟೆಲ್ ಮುಂಭಾಗ ಪ್ರತಿಭಟನೆ ನಡೆಸಲಾಗಿದ್ದು, ಪ್ರತಿಭಟನಾಕಾರರಲ್ಲಿ ಅನೇಕ ಮಂದಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News