ಭಾರತದಲ್ಲಿ 26 ಸಾವಿರ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ; 821 ಮಂದಿ ಮೃತ್ಯು

Update: 2020-04-26 03:43 GMT

ಹೊಸದಿಲ್ಲಿ: ದೇಶದಲ್ಲಿ ಶನಿವಾರ ಕೊರೋನ ಸೋಂಕಿತರ ಸಂಖ್ಯೆ 25 ಸಾವಿರವನ್ನು ದಾಟಿದೆ. ಮಹಾರಾಷ್ಟ್ರದಲ್ಲಿ ಹೊಸದಾಗಿ ಗರಿಷ್ಠ ಅಂದರೆ 811 ಪ್ರಕರಣಗಳು ಬೆಳಕಿಗೆ ಬಂದಿದ್ದು, 602 ಪ್ರಕರಣಗಳು ಮುಂಬೈ ಮಹಾನಗರದಲ್ಲೇ ದೃಢಪಟ್ಟಿವೆ.

ದೇಶದಲ್ಲಿ ಶನಿವಾರ ಒಟ್ಟು 1715 ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೋವಿಡ್-19 ಸೋಂಕಿತರ ಸಂಖ್ಯೆ 26270ಕ್ಕೇರಿದೆ. ವಿಶ್ವದಲ್ಲಿ ಗರಿಷ್ಠ ಸೋಂಕಿತರು ಇರುವ ರಾಷ್ಟ್ರಗಳ ಪೈಕಿ ಭಾರತ 16ನೇ ಸ್ಥಾನಕ್ಕೇರಿದೆ.

ರಾಜ್ಯಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ ಶನಿವಾರ 43 ಸಾವಿನ ಪ್ರಕರಣಗಳು ವರದಿಯಾಗಿದ್ದು, ಮೃತಪಟ್ಟ ಸೋಂಕಿತರ ಸಂಖ್ಯೆ 821ಕ್ಕೇರಿದೆ. ಮುಂಬೈನಲ್ಲಿ 13 ಸೇರಿದಂತೆ 22 ಸಾವುಗಳು ಮಹಾರಾಷ್ಟ್ರದಲ್ಲೇ ಸಂಭವಿಸಿದ್ದು, ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ತಲಾ ಆರು, ರಾಜಸ್ಥಾನದಲ್ಲಿ ಮೂವರು, ಆಂಧ್ರಪ್ರದೇಶದಲ್ಲಿ ಇಬ್ಬರು, ದೆಹಲಿ, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದಲ್ಲಿ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಶನಿವಾರ 256 ಹೊಸ ಪ್ರಕರಣಗಳು ದಾಖಲಾದ ಗುಜರಾತ್ ರಾಜ್ಯ, ದೇಶದಲ್ಲಿ 3000ದ ಗಡಿ ದಾಟಿದ ಎರಡನೇ ರಾಜ್ಯ ಎನಿಸಿದೆ. ಈ ಪೈಕಿ ಶೇಕಡ 65ರಷ್ಟು ಪ್ರಕರಣಗಳು ಅಹ್ಮದಾಬಾದ್‌ನಲ್ಲೇ ವರದಿಯಾಗಿದ್ದು, ನಗರದಲ್ಲಿ ಸೋಂಕಿತರ ಸಮಖ್ಯೆ 2000ವನ್ನು ಮೀರಿದೆ. ರಾಜ್ಯದಲ್ಲಿ ಒಟ್ಟು 133 ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ ಹೊರತುಪಡಿಸಿದರೆ ಗುಜರಾತ್ ಎರಡನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News